ಬೆಂಗಳೂರು, ಮೇ 04 (DaijiworldNews/MB) : ಕೊರೊನಾದಿಂದ ಮೃತಪಟ್ಟವರ ಉಚಿತ ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಗುವುದು, ಹಾಗೆಯೇ ಅಂತ್ಯ ಸಂಸ್ಕಾರಕ್ಕೆ ಬರುವವರಿಗೆ ಕಾಫಿ, ತಿಂಡಿ, ಊಟದ ವ್ಯವಸ್ಥೆಯಿದೆ ಎಂದು ನಗರದ ಹೊರವಲಯದಲ್ಲಿ ಹಾಕಲಾಗಿದ್ದ ಬೋರ್ಡ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕೊರೊನಾ ಸಾವಿನ ವಿಚಾರದಲ್ಲೂ ಪ್ರಚಾರದ ತೆವಲು ತೀರಿಸಿಕೊಳ್ಳುವ ಬಿಜೆಪಿ ನಾಯಕರ ವಿರುದ್ದ ಈಗ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಗಿಡ್ಡೇನಹಳ್ಳಿ ಫ್ಲೆಕ್ಸ್ ಒಂದನ್ನು ಹಾಕಲಾಗಿದ್ದು, ಆ ಫ್ಲೆಕ್ಸ್ನಲ್ಲಿ ಕೊರೊನಾದಿಂದ ಮೃತಪಟ್ಟವರ ಉಚಿತ ಅಂತ್ಯ ಸಂಸ್ಕಾರಕ್ಕೆ ಗಿಡ್ಡೇನಹಳ್ಳಿಗೆ ಹೋಗುವ ದಾರಿ ಎಂದು ಗುರುತು ಮಾಡಲಾಗಿದೆ. ಹಾಗೆಯೇ ಕೋವಿಡ್ನಿಂದ ಮೃತಪಟ್ಟವರನ್ನು ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಅಂತ್ಯ ಸಂಸ್ಕಾರ ಮಾಡಲು ಜಿಲ್ಲಾಡಳಿತ ವತಿಯಿಂದ ವ್ಯವಸ್ಥೆ ಮಾಡಿರುವ ಈ ಕಾರ್ಯಕ್ಕೆ ಉಚಿತವಾಗಿ ನೀರು, ಕಾಫಿ, ಟೀ, ತಿಂಡಿ, ಊಟದ ವ್ಯವಸ್ಥೆಯನ್ನು ಯಲಹಂಕ ಕ್ಷೇತ್ರದ ಜನಪ್ರಿಯ ಶಾಸಕರಾದ ಹಾಗೂ ಬಿಡಿಎ ಅಧ್ಯಕ್ಷರಾದ ಎಸ್. ಆರ್. ವಿಶ್ವನಾಥ್ರವರ ಮಾರ್ಗದರ್ಶನದಲ್ಲಿ ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಎಸ್. ಮಲ್ಲಯ್ಯನವರ ನೇತೃತ್ವದಲ್ಲಿ ವ್ಯವಸ್ಥೆ ಮಾಡಿರುತ್ತಾರೆ ಎಂದು ಬರೆಯಲಾಗಿದೆ.
ಅಷ್ಟೇ ಅಲ್ಲದೇ ಈ ಫ್ಲೆಕ್ಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಆರ್. ಅಶೋಕ್, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಫೋಟೋವನ್ನು ಕೂಡಾ ಹಾಕಲಾಗಿದೆ.
ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ. ಅಂತ್ಯಸಂಸ್ಕಾರದಲ್ಲೂ ಪ್ರಚಾರದ ತೆವಲು ತೀರಿಸಿಕೊಳ್ಳಬೇಕಾ ಎಂದು ಪ್ರಶ್ನಿಸಿದ್ದಾರೆ. ಹಾಸಿಗೆ ನೀಡದೆ ಜನರನ್ನು ಸಾಯಿಸಿ ಈಗ ಅಂತ್ಯಸಂಸ್ಕಾರದಲ್ಲಿ ಪ್ರಚಾರಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಮೊದಲು ಉಚಿತ ಚಿಕಿತ್ಸೆ ನೀಡಿ, ಸರಿಯಾದ ವ್ಯವಸ್ಥೆ ಮಾಡದೆ ಜನರನ್ನು ಕೊಂದು ಕಾಫಿ, ತಿಂಡಿ ಕೊಟ್ಟು ಪ್ರಚಾರ ಪಡೆಯುವುದಲ್ಲಾ ಎಂದು ಕೂಡಾ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಫ್ಲೆಕ್ಸ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗುತ್ತಿದ್ದಂತೆ ಫ್ಲೆಕ್ಸ್ ಅನ್ನು ತೆರವುಗೊಳಿಸಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರು, ''ಗಿಡ್ಡೇನಹಳ್ಳಿ ಸುತ್ತ–ಮುತ್ತ ಜನರು ವಾಸಿಸುತ್ತಿಲ್ಲ. ಸುತ್ತಲೂ ಕಲ್ಲು ಬಂಡೆಗಳೇ ಇದ್ದು, ಸರಿಯಾದ ನೀರಿನ ವ್ಯವಸ್ಥೆಯೂ ಇಲ್ಲ. ಈ ನಿಟ್ಟಿನಲ್ಲಿ ಅಂತ್ಯಸಂಸ್ಕಾರಕ್ಕೆ ಬರುವವರಿಗೆ ಸಮಸ್ಯೆ ಆಗದಿರಲಿ ಎಂದು ಮಾನವೀಯ ನೆಲೆಗಟ್ಟಿನಲ್ಲಿ ನಾನು ಅಧಿಕಾರಿಗಳ ಬಳಿ ನೀರು ಮತ್ತು ಆಹಾರ ಪೂರೈಸಲು ತಿಳಿಸಿದ್ದೆ. ಆದರೆ ಅದನ್ನು ಈ ರೀತಿ ಪ್ರಧಾನಿ, ಮುಖ್ಯಮಂತ್ರಿ ಮತ್ತು ನನ್ನ ಫೋಟೊ ಹಾಕಿ ಪ್ರಚಾರ ಮಾಡುವುದು ಸರಿಯಲ್ಲ, ನನ್ನ ವಿಷಾದವಿದೆ'' ಎಂದು ಹೇಳಿದ್ದಾರೆ.