ನವದೆಹಲಿ, ಮೇ 4 (DaijiworldNews/MS): ಕೇಂದ್ರ ಸರ್ಕಾರದಿಂದ ನಮಗೆ ಮುಂಚಿತವಾಗಿ ಆದೇಶ ಬಾರದೆ ಇರುವುದರಿಂದ ನಾವು ಹೆಚ್ಚಿನ ಲಸಿಕೆ ಉತ್ಪಾದನೆ ಮಾಡಿರಲಿಲ್ಲ. ಹೀಗಾಗಿ ದೇಶದಲ್ಲಿ ಜುಲೈವರೆಗೆ ಕೊರೋನಾ ಲಸಿಕೆ ಕೊರತೆ ಉಂಟಾಗಲಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಆದಾರ್ ಪೂನಾವಾಲಾ ಹೇಳಿದ್ದಾರೆ.
ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದರು ಆದರೆ, ದೇಶದಲ್ಲಿ ಕೊರೊನಾ ಲಸಿಕೆಯ ಕೊರತೆ ಇರುವುದರಿಂದ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲಾಡಲಾಗುತ್ತಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿ ಮಾತನಾಡಿದ ಅವರು ದೇಶದಲ್ಲಿ ಕೊರೊನಾದ ಎರಡನೇ ಅಲೆ ಇಷ್ಟೊಂದು ಪ್ರಮಾಣದಲ್ಲಿ ವ್ಯಾಪಿಸುವ ನಿರೀಕ್ಷೆ ಇರಲಿಲ್ಲ. ಹಾಗಾಗಿ, ಸರ್ಕಾರ, ಅಧಿಕಾರಿಗಳು ಹೆಚ್ಚಿನ ಲಸಿಕೆ ಉತ್ಪಾದಿಸುವಂತೆ ಆರ್ಡರ್ ನೀಡಿರಲಿಲ್ಲ. ಹೀಗಾಗಿ ನಾವು ಕೂಡ ಹೆಚ್ಚಿನ ಉತ್ಪಾದನೆಗೆ ಸಿದ್ಧತೆ ಮಾಡಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಸದ್ಯಕ್ಕೆ ಲಸಿಕೆಯ ಕೊರತೆ ಮುಂದುವರೆಯಲಿದೆ .ಸಿರಮ್ ಸಂಸ್ಥೆ, ತಿಂಗಳಿಗೆ ಸುಮಾರು 6 -7 ಕೋಟಿ ಡೋಸ್ ಕೊವೀಡ್ ಲಸಿಕೆಯನ್ನು ಉತ್ಪಾದನೆ ಮಾಡುತ್ತಿದ್ದು, ಜುಲೈ ವೇಳೆಗೆ 10 ಕೋಟಿ ಡೋಸ್ ಉತ್ಪಾದನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಬಳಿಕ ನಿರೀಕ್ಷಿತ ಪ್ರಮಾಣದಲ್ಲಿ ದೇಶದಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.