ಕೋಲ್ಕತಾ, ಮೇ. 03 (DaijiworldNews/HR): ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಗೆಲುವಿನ ಪತಾಕೆ ಹಾರಿಸಿದ್ದು, ಮೇ 5ರಂದು ಮೂರನೇ ಬಾರಿ ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈ ಕುರಿತು ಇಂದು ನಡೆದ ಪಕ್ಷದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ತೃಣಮೂಲ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿರುವುದಾಗಿ ವರದಿ ತಿಳಿಸಿದೆ.
ಇನ್ನು ಮುಖ್ಯಮಂತ್ರಿ ಪ್ರಮಾಣವಚನದ ಬಳಿಕ ಮೇ 6ರಂದು ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಬಂಗಾಳದಲ್ಲಿ ಟಿಎಂಸಿ ಪಕ್ಷ ಜಯಭೇರಿ ಗಳಿಸಿದ್ದರು ಕೂಡಾ, ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋತಿದ್ದಾರೆ.
ನಂದಿಗ್ರಾಮದ ಫಲಿತಾಂಶದ ಬಗ್ಗೆ ಆಕ್ರೋಶವ್ಯಕ್ತಪಡಿಸಿರುವ ಮಮತಾ ಮರು ಮತಎಣಿಕೆ ನಡೆಸುವಂತೆ ಒತ್ತಾಯಿಸಿದ್ದು, ಅಲ್ಲದೇ ಚುನಾವಣಾ ಆಯೋಗದ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವುದಾಗಿ ತಿಳಿಸಿದ್ದಾರೆ.