ಬೆಂಗಳೂರು, ಮೇ.03 (DaijiworldNews/PY): "ಚಾಮರಾಜನಗರ ಕೊರೊನಾ ಆಸ್ಪತ್ರೆಯಲ್ಲಿ ಸಂಭವಿಸಿರುವುದು ಕ್ಷಮೆಗೆ ಅರ್ಹವಲ್ಲ ಘಟನೆ. ಈ ಘಟನೆ ಆಕ್ಸಿಜನ್ ಸಮಸ್ಯೆಯಿಂದ ನಡೆದಿದ್ದರೆ ಸರ್ಕಾರವೇ ಹೊಣೆ ಹೊರಬೇಕು" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಚಾಮರಾಜನಗರ ಕೊರೊನಾ ಆಸ್ಪತ್ರೆಯಲ್ಲಿ ನಡೆದ ಘಟನೆಗೆ ಸಚಿವರೇ ಹೊಣೆ ಆಗಿದ್ದರೆ ಸಚಿವರೇ ಹೊಣೆ ಹೊರಬೇಕು. ಒಂದು ವೇಳೆ ನಾನು ಸಚಿವನಾಗಿ ಈ ರೀತಿಯ ಘಟನೆ ನನ್ನ ಗಮನಕ್ಕೆ ಬಂದು ಕ್ರಮ ಕೈಗೊಳ್ಳದಿದ್ದರೆ ನಾನೇ ಹೊಣೆ ಹೊರುತ್ತಿದ್ದೆ. ಈ ಘಟನೆಗೆ ಯಾರೇ ಹೊಣೆ ಅಗಿದ್ದರೂ ಕೂಡಾ ಕಠಿಣ ಕ್ರಮ ಕೈಗೊಳ್ಳಬೇಕು" ಎಂದಿದ್ದಾರೆ.
"ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾರೇ ಆಗಿದ್ದರೂ ಕೂಡಾ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರಿಗೆ ನಾನು ಮನವಿ ಮಾಡಿದ್ದೇನೆ. ಈ ಘಟನೆಯ ಬಗ್ಗೆ ನನಗೆ ತಿಳಿದ ಕೂಡಲೇ ನಾನು ಸಿಎಂ ಅವರನ್ನು ಭೇಟಿ ಮಾಡಿ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ. ಈ ರೀತಿಯಾದ ಘಟನೆ ಮರುಕಳಿಸದಂತೆ ಎಲ್ಲಾ ಜಿಲ್ಲೆಯಲ್ಲೂ ಎಚ್ಚರವಹಿಸುವಂತೆ ಒತ್ತಾಯಿಸುತ್ತೇನೆ" ಎಂದು ಹೇಳಿದ್ದಾರೆ.
"ತುರ್ತು ಆರೋಗ್ಯ ಪರಿಸ್ಥಿತಿಯ ಸಂದರ್ಭ ಅಗತ್ಯ ಆರೋಗ್ಯ ಸೇವೆ ವ್ಯವಸ್ಥೆ ಬಲಪಡಿಸಬೇಕು. ಸರ್ಕಾರಕ್ಕೆ ನಾನು ಹಲವು ಸಲಹೆ ನೀಡಿದ್ದು, ಆ ಪೈಕಿ ಕೆಲವನ್ನು ಈಡೇರಿಸಿದ್ದಾರೆ. ಕೊರೊನಾ ಪ್ರಕರಣಗಳ ಸಂಖ್ಯೆ ಏಕಾಏಕಿ ಹೆಚ್ಚಾಗುತ್ತಿರುವ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದಿದ್ದಾರೆ.
"ರಾಜೀನಾಮೆ ಪಡೆಯುವುದರಿಂದ ಸಮಸ್ಯೆ ನಿವಾರಣೆಯಾದರೆ, ಸಾವನ್ನಪ್ಪಿದವರು ವಾಪಾಸ್ಸು ಬರುತ್ತಾರೆ ಎನ್ನುವುದಾದರೆ ನಮಗೆ ಅಧಿಕಾರ ಮುಖ್ಯವಲ್ಲ. ಮಹಾರಾಷ್ಟ್ರ, ದೆಹಲಿಯಲ್ಲಿ ಈ ರೀತಿ ಆಗಿದೆ. ಅಲ್ಲಿ ರಾಜೀನಾಮೆ ಕೊಡಿ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವುದಾದರೆ ನಮಗೆ ಅಧಿಕಾರ ಮುಖ್ಯವಲ್ಲ" ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.