ಚಾಮರಾಜನಗರ, ಮೇ. 03 (DaijiworldNews/HR): ಚಾಮರಾಜನಗದ ಕೊರೊನಾ ಜಿಲ್ಲಾ ಆಸತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೂವರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಚಾಮರಾಜನಗರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಈಗಾಗಲೇ ಸಿಎಂ ಆದೇಶ ನೀಡಿದ್ದಾರೆ. ನ್ಯಾಯಸಮ್ಮತ ತನಿಖೆ ಆಗಲಿದೆ, ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 123 ಸೋಂಕಿತರು ದಾಖಲಾಗಿದ್ದಾರೆ. ವೆಂಟಿಲೇಟರ್ನಲ್ಲಿ 14 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದರು.
ಇನ್ನು "ನಿನ್ನೆ ಬೆಳಗ್ಗೆ 7 ಗಂಟೆಯಿಂದ ಮಧ್ಯರಾತ್ರಿವರೆಗೆ 14 ಜನ ಸಾವನ್ನಪ್ಪಿದ್ದು, ಇವರೆಲ್ಲರೂ ಕೊರೊನಾ ಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿ 12ರಿಂದ 3 ಗಂಟೆವರೆಗೆ ಮೂವರು ಸಾವನ್ನಪ್ಪಿದ್ದಾರೆ. ಮುಂಜಾನೆ 3 ಗಂಟೆಯಿಂದ 7 ಗಂಟೆಯವರೆಗೆ 7 ಜನ ಸಾವುನ್ನಪ್ಪಿದ್ದು, 24 ಗಂಟೆಯಲ್ಲಿ 23 ಜನರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 24 ಸೋಂಕಿತರು ಮೃತಪಟ್ಟಿದ್ದಾರೆ. ನಮಗೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಆಕ್ಸಿಜನ್ ಕೊರತೆಯಿಂದ ಮೂವರು ಮಾತ್ರ ಮೃತಪಟ್ಟಿದ್ದಾರೆ" ಎಂದು ಸ್ಪಷ್ಟನೆ ನೀಡಿದ್ದಾರೆ.