ಶ್ರೀನಗರ, ಮೇ.03 (DaijiworldNews/PY): ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ರಾಮ್ಗರ್ ಸೆಕ್ಟರ್ನಲ್ಲಿ ಪಾಕಿಸ್ತಾನ ಸೇನೆ ಸೋಮವಾರ ಬೆಳಗ್ಗೆ ಕದನ ವಿರಾಮ ಉಲ್ಲಂಘಿಸಿ ಬಿಎಸ್ಎಫ್ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ
ಉಭಯ ದೇಶಗಳು ಫೆಬ್ರವರಿ 24ರಂದು ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನ ಸೈನಿಕರು ಅಂತರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದಾರೆ.
"ಪಾಕಿಸ್ತಾನ ರೇಂಜರ್ಸ್ ಸಾಂಬಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿಯುದ್ದಕ್ಕೂ ರಾಮ್ಗರ್ ಸೆಕ್ಟರ್ನಲ್ಲಿ ಬೆಳಗ್ಗೆ 6.15ರ ಸುಮಾರಿಗೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ" ಎಂದು ಬಿಎಸ್ಎಫ್ ವಕ್ತಾರರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
"ಪಾಕ್ ಸೈನಿಕರ ಗುಂಡಿನ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆಯ ಸೈನಿಕರೂ ಕೂಡಾ ಗುಂಡಿನ ದಾಳಿ ನಡೆಸಿದ್ದು, ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ" ಎಂದು ಹೇಳಿದ್ದಾರೆ.