ಮಹೋಬಾ, ಮೇ 03 (DaijiworldNews/MB) : ವರನು 2 ರ ಮಗ್ಗಿ ಹೇಳಲು ವಿಫಲವಾದ ಕಾರಣಕ್ಕೆ ವಿವಾಹವೇ ರದ್ದಾದ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಪನ್ವಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವರ ಅಲಂಕಾರ ಮಾಡಿಕೊಂಡು ಶನಿವಾರ ಸಂಜೆ ತಮ್ಮ ದಿಬ್ಬಣದೊಂದಿಗೆ ವಿವಾಹ ಮಂಟಪವನ್ನು ತಲುಪಿದ್ದು ಆ ಸಂದರ್ಭದಲ್ಲೇ ವರನ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಅನುಮಾನ ಹೊಂದಿದ್ದ ವಧು, ಹೂಮಾಲೆ ಹಾಕುವುದಕ್ಕೂ ಮೊದಲು 2 ನೇ ಮಗ್ಗಿ ಹೇಳಲು ಹೇಳಿದಳು. ಆದರೆ ವರನಿಗೆ ಮಗ್ಗಿ ಹೇಳಲು ಆಗದ ಕಾರಣ ವಧು ವಿವಾಹವಾಗಲು ನಿರಾಕರಿಸಿದ್ದು ಮದುವೆಯನ್ನು ಕೊನೆಗೆ ರದ್ದು ಮಾಡಲಾಗಿದೆ.
ಪನ್ವಾರಿ ಸ್ಟೇಷನ್ ಹೌಸ್ ಆಫೀಸರ್ ವಿನೋದ್ ಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಇದು ಪೋಷಕರು ನೋಡಿ ಗೊತ್ತು ಮಾಡಿರುವ ವಿವಾಹವಾಗಿದ್ದು, ವರ ಮಹೋಬಾ ಜಿಲ್ಲೆಯ ಧವಾರ್ ಗ್ರಾಮದವರು ಆಗಿದ್ದಾರೆ ಎಂದು ತಿಳಿಸಿದ್ದಾರೆ.
ಎರಡು ಕುಟುಂಬಗಳ ಸದಸ್ಯರು ಮತ್ತು ಹಲವಾರು ಗ್ರಾಮಸ್ಥರು ಮದುವೆ ಸ್ಥಳದಲ್ಲಿ ಜಮಾಯಿಸಿದ್ದರು. ವರನು 2 ನೇ ಮಗ್ಗಿಯನ್ನೂ ಹೇಳಲು ವಿಫಲವಾದ ಕಾರಣ ವಧು ಮಂಟಪದಿಂದ ಹೊರನಡೆದಿದ್ದು ಗಣಿತದ ಮೂಲಭೂತ ಅಂಶಗಳನ್ನು ತಿಳಿದಿಲ್ಲದ ವ್ಯಕ್ತಿಯನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿದಳು. ವಧುವನ್ನು ಮನವೊಲಿಸುವಲ್ಲಿ ಸ್ನೇಹಿತರು ಮತ್ತು ಸಂಬಂಧಿಕರು ವಿಫಲರಾಗಿದ್ದಾರೆ.
ವರ ಅಶಿಕ್ಷಿತ ಎಂದು ತಿಳಿದು ನಾವು ಆಘಾತಕ್ಕೊಳಗಾಗಿದ್ದೇವೆ ಎಂದು ವಧುವಿನ ಸೋದರಸಂಬಂಧಿ ಹೇಳಿದರು.
"ವರನ ಕುಟುಂಬವು ಅವನ ಶಿಕ್ಷಣದ ಬಗ್ಗೆ ನಮ್ಮಲ್ಲಿ ಸುಳ್ಳು ಹೇಳಿತ್ತು. ಅವನು ಶಾಲೆಗೆ ಹೋಗದೆಯೂ ಇರಬಹುದು. ವರನ ಕುಟುಂಬವು ನಮಗೆ ಮೋಸ ಮಾಡಿದೆ. ಆದರೆ ನನ್ನ ಧೈರ್ಯಶಾಲಿ ಸಹೋದರಿ ಸಮಾಜಕ್ಕೆ ಹೆದರದೆ ತನ್ನ ಜೀವನವನ್ನೂ ತಾನೇ ನಿರ್ಧರಿಸಿದ್ದಾಳೆ'' ಎಂದು ಹೇಳಿದ್ದಾರೆ.
ಗ್ರಾಮದ ಪ್ರಮುಖರು ಮಾತನಾಡಿ ವಧು, ವರನ ಕಡೆಯವರನ್ನು ರಾಜಿ ಮಾಡಿಸಿದ ಕಾರಣ ಪೊಲೀಸರು ಪ್ರಕರಣ ದಾಖಲಿಸಲಿಲ್ಲ. ವಧು-ವರರ ಕುಟುಂಬಗಳು ಉಡುಗೊರೆ ಮತ್ತು ಆಭರಣಗಳನ್ನು ಹಿಂದಿರುಗಿಸುವ ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಾಗಿದೆ.