ಬೆಂಗಳೂರು, ಮೇ.03 (DaijiworldNews/PY): "ಚಾಮರಾಜನಗರ ಆಸ್ಪತ್ರೆಯಲ್ಲಿ ರೋಗಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸಮಗ್ರವಾದ ತನಿಖೆ ವರದಿ ನೀಡಬೇಕು ಎಂದು ತಿಳಿಸಿದ್ದೇನೆ" ಎಂದು ಗೃಹ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಚಾಮರಾಜನಗರ ಆಸ್ಪತ್ರೆಯಲ್ಲಿ ರೋಗಿಗಳ ಸಾವಿಗೆ ಕಾರಣ ಏನು ಎನ್ನುವುದರ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದೇನೆ. ಈ ಘಟನೆಯಿಂದ ದುಃಖವಾಗಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಪ್ರಕರಣ ಬಗ್ಗೆ ಸತ್ಯಾಸತ್ಯತೆ ಏನು ಎನ್ನುವುದನ್ನು ತಿಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವರದಿ ನೀಡಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು" ಎಂದಿದ್ದಾರೆ.
ಈ ಬಗ್ಗೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಕೂಡಾ ಪ್ರತಿಕ್ರಿಯೆ ನೀಡಿದ್ದು, "ಚಾಮರಾಜನಗರ ಆಸ್ಪತ್ರೆಯಲ್ಲಿನ ಅವಘಡಕ್ಕೆ ಮೈಸೂರು ಜಿಲ್ಲಾಧಿಕಾರಿ ಹಾಗೂ ಜನರು ಕಾರಣ" ಎಂದು ಆರೋಪಿಸಿದ್ದಾರೆ.
"ಆಕ್ಸಿಜನ್ಗಾಗಿ ಮಂಡ್ಯ ಹಾಗೂ ಚಾಮರಾಜ ಜಿಲ್ಲೆಗಳು ಮೈಸೂರನ್ನು ಅವಲಂಬಿಸಿವೆ. ಆದರೆ, ಸರಿಯಾದ ಸಮಯಕ್ಕೆ ಮೈಸೂರಿನಿಂದ ಆಕ್ಸಿಜನ್ ಪೂರೈಕೆ ಅಗದೇ ಇರುವ ಕಾರಣ ಈ ಘಟನೆ ನಡೆದಿದೆ" ಎಂದಿದ್ದಾರೆ.
"ಎಲ್ಲಾ ಸಾವುಗಳು ಆಕ್ಸಿಜನ್ ಕೊರತೆಯಿಂದ ನಡೆದಿದೆಯಾ ಎನ್ನುವುದನ್ನು ಪರಿಶೀಲಿಸಲಾಗುವುದು. ರಾತ್ರಿ 12.30 ರಿಂದ 2.30ರವರೆಗೆ ಆಕ್ಸಿಜನ್ ಕೊರತೆ ಆಗಿದೆ. ಆಕ್ಸಿಜನ್ ಕೊರತೆಯಿಂದ 24 ಮಂದಿ ಸಾವನ್ನಪ್ಪಿದ್ದಾರೆ ಎನ್ನುವುದು ಸರಿಯಲ್ಲ. 24 ಸಾವುಗಳು ಯಾವ ಕಾರಣದಿಂದ ಅಗಿದೆ ಎನ್ನುವುದಕ್ಕೆ ಮಾಹಿತಿ ಕೋರಿದ್ದೇನೆ" ಎಂದು ತಿಳಿಸಿದ್ದಾರೆ.
"ಯಾವ ಕಾರಣದಿಂದ ಸಾವು ಸಂಭವಿಸಿದೆ ಎನ್ನುವ ಬಗ್ಗೆ ತನಿಖೆ ನಡೆಸಿದ ನಂತರ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಡೆತ್ ಆಡಿಟ್ ವರದಿ ನೋಡಿ ಸೂಕ್ತ ತನಿಖೆಗೆ ಆದೇಶ ನೀಡಲಾಗುವುದು" ಎಂದು ಹೇಳಿದ್ದಾರೆ.