ಬೆಂಗಳೂರು, ಮೇ.03 (DaijiworldNews/PY): "ಆಕ್ಸಿಜನ್ ಸಿಗದೆ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಮೃತಪಟ್ಟಿರುವುದಕ್ಕೆ ಯಾರು ಹೊಣೆ. ಸರ್ಕಾರದ ನಿರ್ಲಕ್ಷ್ಯಕ್ಕೆ ಜನರು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರಕ್ಕೆ ಕೊರೊನಾ ಸೋಂಕಿತರಿಗೆ ಆಮ್ಲಜನಕ ಪೂರೈಸಲು ಸಾಧ್ಯವಾಗದ ಸ್ಥಿತಿ ಬಂದಿದೆ. ಇದೆಂತಹ ಸರ್ಕಾರ?. ಬಿಜೆಪಿ ನಾಯಕರಿಗೆ ಪ್ರಚಾರ ಮುಖ್ಯವಾಗಿದೆ. ಬದಲಾಗಿ ಜನರ ಜೀವಗಳು ಮುಖ್ಯವಲ್ಲ" ಎಂದು ಕಿಡಿಕಾರಿದ್ದಾರೆ.
"ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಇದೆ ಎನ್ನುವ ದೂರುಗಳು ಹಲವು ದಿನಗಳಿಂದ ಕೇಳಿಬರುತ್ತಿದೆ. ಆದರೆ, ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಬೇಜವಾಬ್ದಾರಿಯಾಗಿ ನಡೆದುಕೊಂಡಿದೆ. ಈ ಬಗ್ಗೆ ಮಂತ್ರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈ ವ್ಯವಸ್ಥೆ ಸರಿಯಾಗಲು ಅದೆಷ್ಟು ಜೀವಗಳು ಬಲಿಯಾಗಬೇಕು?" ಎಂದು ಕೇಳಿದ್ದಾರೆ.
ಆಕ್ಸಿಜನ್ ಸಿಗದೆ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ರವಿವಾರ ರಾತ್ರಿ 20ಕ್ಕೂ ಹೆಚ್ಚು ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಕುರಿತು ಮಂಗಳವಾರ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿನ ಆಕ್ಸಿಜನ್ ಕೊರತೆಯ ಕುರಿತಂತೆ ಚರ್ಚಿಸಲು ತುರ್ತು ಸಚಿವ ಸಂಪುಟ ಸಭೆಯನ್ನು ಕರೆದಿದ್ದಾರೆ.