ಚೆನ್ನೈ, ಮೇ.03 (DaijiworldNews/PY): ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಎಐಎಂಡಿಕೆ ಹಿನ್ನಡೆ ಅನುಭವಿಸಿದ ಕಾರಣ ತಮಿಳುನಾಡು ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ.
ಪಳನಿಸ್ವಾಮಿ ಅವರು ತಮ್ಮ ಕಾರ್ಯದರ್ಶಿಯ ಮೂಲಕ ಸೇಲಂಗೆ ರಾಜೀನಾಮೆ ಕಳುಹಿಸಿದ್ದಾರೆ. ಮಧ್ಯಾಹ್ನ 1 ಗಂಟೆಯೊಳಗೆ ಪತ್ರ ರಾಜ್ಯಪಾಲರಿಗೆ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.
ಡಿಎಂಕೆ ಪಕ್ಷದ ನಾಯಕ ಎಂ.ಕೆ ಸ್ಟಾಲಿನ್ ಅವರ ನೇತೃತ್ವದ ನೂತನ ಸರ್ಕಾರ ಉಸ್ತುವಾರಿ ವಹಿಸಿಕೊಳ್ಳಲಿದ್ದು, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ದಿನಾಂಕ ಫಿಕ್ಸ್ ಆಗಿದೆ.
ಮೇ 7ರಂದು ಎಂ.ಕೆ ಸ್ಟಾಲಿನ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ತಮಿಳುನಾಡಿನ ಒಟ್ಟು 234 ಕ್ಷೇತ್ರಗಳ ಪೈಕಿ ಡಿಎಂಕೆ 159 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಈ ಮುಖೇನ ಡಿಎಂಕೆ ಅಧಿಕಾರದ ಗದ್ದುಗೆ ಏರಲು ತಯಾರಾಗಿದೆ.
ಗೆಲುವಿನ ಬಗ್ಗೆ ಟ್ವೀಟ್ ಮಾಡಿರುವ ಸ್ಟಾಲಿನ್, "ತಮಿಳುನಾಡಿನ ಜನರ ತೀರ್ಪಿನಿಂದ ನಿಮ್ಮ ಸೇವೆ ಮಾಡುವ ಭಾಗ್ಯ ದೊರೆತಿದೆ" ಎಂದಿದ್ದಾರೆ. ಈ ಸಂದರ್ಭ ಅವರು ಕರುಣಾನಿಧಿ ಅವರನ್ನು ನೆನೆದು ಗೌರವ ಸಲ್ಲಿಸಿದ್ದಾರೆ.