ಬೆಂಗಳೂರು, ಮೇ. 03 (DaijiworldNews/HR): ಆಕ್ಸಿಜನ್ ಸಿಗದೆ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ರವಿವಾರ ರಾತ್ರಿ 20ಕ್ಕೂ ಹೆಚ್ಚು ಸೋಂಕಿತರು ಸಾವನ್ನಪ್ಪಿದದು, ಈ ಪ್ರಕರಣ ಸಂಬಂಧ ಸಚಿವ ಸುಧಾಕರ್ ಅವರನ್ನು ಚಾಮರಾಜನಗರಕ್ಕೆ ಹೋಗಿ ಪರಿಸ್ಥಿತಿ ತಿಳಿದುಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಳುಹಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ನಾಳೆ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿನ ಆಕ್ಸಿಜನ್ ಕೊರತೆಯ ಕುರಿತಂತೆ ಚರ್ಚಿಸಲು ತುರ್ತು ಸಚಿವ ಸಂಪುಟ ಸಭೆಯನ್ನು ಕರೆದಿದ್ದಾರೆ.
ಚಾಮರಾಜನಗರದ ಕೊರೊನಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಮೃತಪಟ್ಟಿರುವ ಸಂಬಂಧ ಮಾಹಿತಿ ಜಿಲ್ಲಾಧಿಕಾರಿ ಎಂ ಆರ್ ರವಿ, "ಜಿಲ್ಲಾಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ 20ಕ್ಕೂ ಅಧಿಕ ರೋಗಿಗಳು ಸಾವನ್ನಪ್ಪಿದ್ದಾರೆ. ಇದಕ್ಕೆ ಆಕ್ಸಿಜನ್ ಸಿಗದೇ ಇರೋದು, ಸೇರಿದಂತೆ ಇತರೆ ಕಾರಣದಿಂದ ಆಗಿದೆ" ಎಂದರು.
ಇನ್ನು ನಮಗೆ ಮೈಸೂರಿನಿಂದ ಆಕ್ಸಿಜನ್ ಸಪ್ಲೈ ಆಗ್ತಾ ಇಲ್ಲ. ಆಕ್ಸಿಜನ್ ಸಿಗದೇ ಇದ್ದದ್ದರಿಂದಲೂ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಸಾವನ್ನಪ್ಪಿರೋದಾಗಿ ಹೇಳಿದ್ದಾರೆ. ಆದರೆ ಮಾನವೀಯತೆಯ ದೃಷ್ಠಿಯಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಅಧಿಕೃತವಾಗಿ 250 ಆಕ್ಸಿಜನ್ ಸಿಲಿಂಡರ್ ಅನ್ನು ರವಿವಾರ ಮಧ್ಯರಾತ್ರಿಯ ವೇಳೆಗೆ ಕಳುಹಿಸಲಾಗಿದ್ದು, ಯಾವುದೇ ವಿಳಂಬವಾಗಿಲ್ಲ ಎಂದು ಮೈಸೂರು ಜಿಲ್ಲಾಡಳಿತ ತಿಳಿಸಿದೆ.
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಸುರೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, "ರವಿವಾರ ರಾತ್ರಿ 9 ಗಂಟೆಯಿಂದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಆಗಿದೆ. ವೈದ್ಯರನ್ನು ಕೇಳಿದ್ರೆ ಅಸಾಹಯಕರಾಗಿ ಉತ್ತರಿಸುತ್ತಾರೆ. ಈ ವೇಳೆ ರೋಗಿಗಳನ್ನು ಉಳಿಸಿಕೊಳ್ಳಲು ಕುಟುಂಬಸ್ಥರು ಪರದಾಡಿದ್ದಾರೆ. ನಿನ್ನೆ ಮಧ್ಯರಾತ್ರಿಯಿಂದ ಆಕ್ಸಿಜನ್ ಸಮಸ್ಯೆ ಆಗಿರೋದು" ಎಂದರು.
ಇದರ ಮಧ್ಯೆ ಸಿಎಂ ಯಡಿಯೂರಪ್ಪ ರಾಜ್ಯದಲ್ಲಿನ ಆಕ್ಸಿಜನ್ ಕೊರತೆ ಸೇರಿದಂತೆ ಚಾಮರಾಜನಗರದಲ್ಲಿನ ಭೀಕರ ದುರಂತದ ಬಗ್ಗೆ ಚರ್ಚಿಸಲು, ನಾಳೆ ಸಂಜೆ 4 ಗಂಟೆಗೆ ತುರ್ತು ಸಚಿವ ಸಂಪುಟ ಸಭೆಯನ್ನು ಕರೆದಿದ್ದಾರೆ.