ನವದೆಹಲಿ, ಮೇ. 03 (DaijiworldNews/HR): ಭಾರತದಲ್ಲಿ ಕೊರೊನಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಆಮ್ಲಜನಕದ ಕೊರತೆ ದೊಡ್ಡ ಪ್ರಮಾಣದಲ್ಲಿ ಕಂಡು ಬರುತ್ತಿರುವುದರಿಂದ ಕೊರೊನಾ ಬಿಕ್ಕಟ್ಟಿನ ಪ್ರಕರಣವನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಆದೇಶವನ್ನು ನೀಡಿದೆ.
ಕೊರೊನಾ ರೋಗಿಯು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಸ್ಥಳೀಯ ವಿಳಾಸ ಪ್ರಮಾಣಪತ್ರ ಅಥವಾ ಐಡಿ ಪುರಾವೆಯನ್ನು ಹೊಂದಿಲ್ಲದಿದ್ದರೂ, ಅವರಿಗೆ ಆಸ್ಪತ್ರೆಗೆ ದಾಖಲಿಸುವುದನ್ನು ಮತ್ತು ಅಗತ್ಯ ಔಷಧಿಗಳನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ನೀತಿಯನ್ನು ಎಲ್ಲಾ ರಾಜ್ಯ ಸರ್ಕಾರಗಳು ಒಪ್ಪಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದ್ದು, ಈ ನೀತಿಯನ್ನು ರೂಪಿಸದ ಹೊರತು, ಸ್ಥಳೀಯ ವಿಳಾಸ ಪುರಾವೆ ಅಥವಾ ಐಡಿ ಪುರಾವೆ ಇಲ್ಲದೆ ಯಾವುದೇ ರೋಗಿಯನ್ನು ಆಸ್ಪತ್ರೆಗೆ ದಾಖಲಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದಿದೆ.
ಇನು ಭಾರತದಲ್ಲಿ ಆಕ್ಸಿಜನ್ ಬಿಕ್ಕಟ್ಟು ಮತ್ತು ಕೊರೊನಾ ರೋಗದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದು, ಸಾರ್ವಜನಿಕ ಹಿತಾಸಕ್ತಿಗಾಗಿ ಕೊರೊನಾದ ಎರಡನೇ ಅಲೆಯನ್ನು ಕಡಿಮೆ ಮಾಡಲು ಲಾಕ್ ಡೌನ್ ಹೇರುವುದು ಉತ್ತಮ ಎಂದು ಕೇಂದ್ರಕ್ಕೆ ಸಲಹೆ ನೀಡಿದೆ.