ನವದೆಹಲಿ, ಮೇ.03 (DaijiworldNews/PY): "ಕೊರೊನಾ ಸೋಂಕು ಸರಪಳಿಯನ್ನು ಮುರಿಯಲು ಸುಪ್ರೀಂಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ಡೌನ್ ಅನ್ನು ಗಂಭೀರವಾಗಿ ಪರಿಗಣಿಸಬೇಕು" ಎಂದು ಸಲಹೆ ನೀಡಿದೆ.
"ದೇಶದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಾಖಲೆ ರೂಪದಲ್ಲಿಡಬೇಕು. ಮುಂದಿನ ದಿನಗಳಲ್ಲಿ ಅವರು ಕೈಗೊಳ್ಳಲು ಯೋಜಿಸುವ ಕ್ರಮಗಳನ್ನು ಕೂಡಾ ದಾಖಲಿಸಬೇಕು" ಎಂದು ತಿಳಿಸಿದೆ.
"ಕೊರೊನಾ ವೇಗವಾಗಿ ಹರಡಲು ಕಾರಣವಾದ ಸಾಮೂಹಿಕ ಸಭೆ ಸೇರಿದಂತೆ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಬ್ಯಾನ್ ಮಾಡಿ. ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿ ಎಂದು ಕೇಳಿಕೊಳ್ಳುತ್ತೇವೆ" ಎಂದು ಆದೇಶದಲ್ಲಿ ಹೇಳಿದೆ.
"ಅಳಿವಿನಂಚಿನಲ್ಲಿರುವ ಸಮುದಾಯಗಳ ಮೇಲೆ ಲಾಕ್ಡೌನ್ನ ಸಾಮಾಜಿಕ ಹಾಗೂ ಆರ್ಥಿಕ ಪ್ರಭಾವದ ವಿಚಾರದ ಬಗ್ಗೆ ನಾವು ತಿಳಿದಿದ್ದು, ಲಾಕ್ಡೌನ್ ಜಾರಿ ಮಾಡುವ ಮೊದಲು ಈ ಸಮುದಾಯಗಳ ಅವಶ್ಯಕತೆಗಳನ್ನು ಮೊದಲೇ ಪೂರೈಸುವ ವ್ಯವಸ್ಥೆ ಮಾಡಬೇಕು" ಎಂದು ತಿಳಿಸಿದೆ.