ಕೋಲ್ಕತ್ತಾ, ಮೇ 02 (DaijiworldNews/MB) : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಫರ್ಧಿಸಿದ್ದ ನಂದಿಗ್ರಾಮದ ಫಲಿತಾಂಶದ ಬಗ್ಗೆ ಭಾರೀ ಗೊಂದಲ ಉಂಟಾಗಿದೆ. ಈಗಾಗಲೇ ಸಂಜೆ 4:30ರ ಸುಮಾರಿಗೆ ಬಹುತೇಕ ರಾಷ್ಟ್ರೀಯ ಮಾಧ್ಯಮಗಳು ಮಮತಾ ಗೆಲುವು ಸಾಧಿಸಿರುವುದಾಗಿ ವರದಿ ಮಾಡಿದ್ದು ಈಗ ಸುವೆಂದು ಅವರು 1957 ಮತಗಳ ಜಯ ಗಳಿಸಿದ್ದಾರೆ ಎಂದು ಹೇಳಲಾಗಿದೆ.
ಚುನಾವಣಾ ಆಯೋಗ ಈ ಮಾಹಿತಿ ನೀಡಿದೆ ಎಂದು ಕೂಡಾ ಹೇಳಲಾಗಿದೆ. ಈ ವರದಿಯು ಭಾರೀ ಗೊಂದಲವನ್ನು ಸೃಷ್ಟಿಸಿದ್ದು ಆಯೋಗದ ನಡೆಯ ಬಗ್ಗೆ ನೆಟ್ಟಿಗರು ಶಂಕೆ ವ್ಯಕ್ತಪಡಿಸಿದ್ದಾರೆ.
ಇನ್ನು ಈಗಾಗಲೇ ಮಮತಾ ಬ್ಯಾನರ್ಜಿ ನಂದಿಗ್ರಾಮದ ತೀರ್ಪಿನ ಬಗ್ಗೆ ಮಾತನಾಡಿ, ''ನಾನು ತೀರ್ಪನ್ನು ಸ್ವೀಕರಿಸುತ್ತೇನೆ. ಆದರೆ ಚುನಾವಣಾ ಆಯೋಗದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುತ್ತೇನೆ. ಫಲಿತಾಂಶಗಳ ಘೋಷಣೆಯ ಬಳಿಕ ಕೆಲವು ಬದಲಾವಣೆಗಳು ಮಾಡಲಾಗಿದೆ ಎಂದು ತಿಳಿದು ಬಂದಿದೆ. ನಾನು ಅದನ್ನು ಬಹಿರಂಗಪಡಿಸುತ್ತೇನೆ'' ಎಂದು ಹೇಳಿದ್ದರು.
ಇನ್ನು ಈ ಬಗ್ಗೆ ಅಧಿಕೃತ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಿರುವ ಟಿಎಂಸಿ ನಂದಿಗ್ರಾಮ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ದಯವಿಟ್ಟು ಊಹೆ ಮಾಡಿಕೊಳ್ಳಬೇಡಿ ಎಂದು ಹೇಳಿದೆ.