ಬೆಂಗಳೂರು, ಮೇ 02 (DaijiworldNews/MB) : ಬೆಳಗಾವಿ ಉಪಚುನಾವಣೆಯಲ್ಲಿ ಬಿಜೆಪಿಯ ಲೆಕ್ಕಾಚಾರ ಫಲಿಸಿದ್ದು ಬೆಳಗಾವಿಯ ವಿಜಯಮಾಲೆಯನ್ನು ದಿವಂಗತ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಕೊರಳಿಗೆ ಜನರು ಹಾಕಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಹಾವು ಏಣಿ ಆಟ ನಡೆದಿದ್ದು ಕೊನೆಯಲ್ಲಿ ಮಂಗಳಾ ಸುರೇಶ್ ಅಂಗಡಿ ಗೆಲುವು ತನ್ನದಾಗಿಸಿಕೊಂಡಿದ್ದಾರೆ. ಕಾಂಗ್ರೆಸ್ನ ಸತೀಶ್ ಜಾರಕಿಹೊಳಿ ಭಾರೀ ಪೈಪೋಟಿ ನೀಡಿ ವಿರೋಚಿತ ಸೋಲು ಗಳಿಸಿದ್ದಾರೆ.
ಸುರೇಶ್ ಅಂಗಡಿ ಅವರ ನಿಧನದಿಂದಾಗಿ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯು ದಿವಂಗತ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಸುರೇಶ್ ಅಂಗಡಿ ಅವರನ್ನು ಕಣಕ್ಕಿಳಿಸುವ ಮೂಲಕ ಕ್ಷೇತ್ರದಲ್ಲಿ ಮತ್ತೆ ತನ್ನ ತೆಕ್ಕೆಗೆ ಪಡೆಯುವ ಲೆಕ್ಕಾಚಾರ ಹಾಕಿಕೊಂಡಿತ್ತು. ಬಿಜೆಪಿಯ ಈ ಲೆಕ್ಕಾಚಾರ ಫಲಿಸಿದ್ದು ಬೆಳಗಾವಿಯನ್ನು ತನ್ನ ತೆಕ್ಕೆಯಲ್ಲೇ ಬಿಜೆಪಿ ಉಳಿಸಿಕೊಂಡಿದೆ.
ಕೊನೆಯ ಕ್ಷಣದವರೆಗೂ ಕಾಂಗ್ರೆಸ್, ಬಿಜೆಪಿ ನಡುವೆ ಭಾರೀ ಪೈಪೋಟಿ ನಡೆದಿದೆ. ಕಳೆದ ಬಾರಿ ಭಾರೀ ಮತಗಳ ಮುನ್ನಡೆಯೊಂದಿಗೆ ಜಯಗಳಿಸಿದ್ದ ಬಿಜೆಪಿ ಈ ಬಾರಿ ಕೆಲವೇ ಮತಗಳ ಮುನ್ನಡೆಯಲ್ಲಿ ಜಯಗಳಿಸಿದೆ.
ಎಪ್ರಿಲ್ 17 ರಂದು ಬೆಳಗಾವಿಯ ಉಪಚುನಾವಣೆ ನಡೆದಿದ್ದು ಮೇ 2 ರಂದು ಮತಎಣಿಕೆ ನಡೆದಿದೆ. ಒಟ್ಟು 10 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರೂ ಕಾಂಗ್ರೆಸ್, ಬಿಜೆಪಿ ನಡುವೆ ನೇರ ಪೈಪೋಟಿ ನಡೆದಿದೆ. ಮೂಲತಃ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬೆಳಗಾವಿ ಜಿಲ್ಲೆಯಲ್ಲಿ 20 ವರ್ಷಗಳಿಂದ ಬಿಜೆಪಿ ಬಲವಾಗಿ ಬೇರೂರಿತ್ತು. ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸತತವಾಗಿ ಗೆಲ್ಲುತ್ತಾ ಬಂದಿದ್ದು ಈಗ ಮತ್ತೆ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ತನ್ನ ಭದ್ರಕೋಟೆಯನ್ನು ಮರಳಿ ತೆಕ್ಕೆಗೆ ಪಡೆಯುವಲ್ಲಿ ವಿಫಲವಾಗಿದೆ.