ನವದೆಹಲಿ, ಮೇ.02 (DaijiworldNews/PY): ಪ್ರತಿ ನಿತ್ಯ ನೂರಾರು ಮಂದಿ ಕೊರೊನಾಗೆ ಸಾವನ್ನಪ್ಪುತ್ತಿರುವುದನ್ನು ಕಂಡು, ಬೇಸತ್ತು ಖಾಸಗಿ ಆಸ್ಪತ್ರೆಯ ಯುವ ವೈದ್ಯರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನವದೆಹಲಿಯಲ್ಲಿ ನಡೆದಿದೆ.
ಮೃತ ವೈದ್ಯರನ್ನು ಉತ್ತರಪ್ರದೇಶದ ಗೋರಖ್ಪುರ ನಿವಾಸಿ ಡಾ.ವಿವೇಕ್ ರೈ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮಾಜಿ ಮುಖ್ಯಸ್ಥ ಡಾ.ರವಿ ವಾಂಖೇಡ್ಕರ್ ಟ್ವೀಟ್ ಮಾಡಿದ್ದು, "ಡಾ.ವಿವೇಕ್ ರೈ ಅವರು ಅದ್ಭುತ ವ್ಯಕ್ತಿಯಾಗಿದ್ದರು. ಕೊರೊನಾದ ಸಂದರ್ಭ ನೂರಾರು ಮಂದಿಯ ಪ್ರಾಣ ಉಳಿಸಿದ್ದರು. ಅವರು ಕಳೆದ ಒಂದು ತಿಂಗಳಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಕೊರೊನಾ ಸೋಂಕಿನಿಂದ ನೂರಾರು ಮಂದಿ ಬಲಿಯಾಗುತ್ತಿರುವುದನ್ನು ಕಂಡು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದು ತಿಳಿಸಿದ್ದಾರೆ.
"ಇಂತಹ ಪರಿಸ್ಥಿತಿಯಲ್ಲಿ ಬದುಕುದಕ್ಕಿಂತ ಸಾಯುವುದೇ ಮೇಲು ಎಂದು ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಅವರು ಎರಡು ತಿಂಗಳ ಗರ್ಭಿಣಿ ಪತ್ನಿಯನ್ನು ಅಗಲಿದ್ದಾರೆ" ಎಂದು ಹೇಳಿದ್ದಾರೆ.
"ಕೊರೊನಾ ಬಿಕ್ಕಟ್ಟನ್ನು ನಿರ್ವಹಿಸುವ ಸಂದರ್ಭ ಭಾವನಾತ್ಮಕ ಒತ್ತಡಗಳು ಎದುರಾಗುತ್ತವೆ. ಮೂಲಭೂತ ಆರೋಗ್ಯ ಸೌಲಭ್ಯಗಳ ಕೊರತೆಯ ಕಾರಣದಿಂದ ಯುವ ವೈದ್ಯ ಮೃತಪಟ್ಟಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ದಕ್ಷಿಣ ದೆಹಲಿಯ ಮಾಳ್ವಿಯಾ ನಗರ ಠಾಣೆಯ ಪೊಲೀಸರು ಪ್ರತಿಕ್ರಿಯಿಸಿದ್ದು, "ವೈದ್ಯರು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಏಮ್ಸ್ಗೆ ಕಳುಹಿಸಲಾಗಿದೆ" ಎಂದಿದ್ದಾರೆ.