ಬೆಂಗಳೂರು, ಮೇ 02 (DaijiworldNews/MB) : ಇನ್ನು ಮುಂದೆ ಖಾಸಗಿ ಕೊರೊನಾ ಆಸ್ಪತ್ರೆಗಳು ಆನ್ಲೈನ್ನಲ್ಲಿ ಬೇಡಿಕೆ ಸಲ್ಲಿಸಿದರೆ ಮಾತ್ರ ರೆಮ್ಡಿಸಿವಿರ್ ಮತ್ತು ವೈದ್ಯಕೀಯ ಆಮ್ಲಜನಕ ಲಭ್ಯವಾಗಲಿದೆ.
ಈ ಬಗ್ಗೆ ಸರ್ಕಾರ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಎಲ್ಲಾ ಖಾಸಗಿ ಆಸ್ಪತ್ರೆಯವರು ಕೆ.ಪಿ.ಎಂ.ಇ. ಪೋರ್ಟಲ್ನಲ್ಲಿ ನೋಂದಣಿ ಮಾಡಿ, ಪ್ರತೀ ದಿನ ರೋಗಿಗಳ ಎಸ್.ಆರ್.ಎಫ್. ಐಡಿಯೊಂದಿಗೆ ಆನ್ಲೈನ್ನಲ್ಲಿ ರೆಮ್ಡಿಸಿವಿರ್ ಔಷಧ ಬೇಡಿಕೆಗೆ ಮನವಿ ಸಲ್ಲಿಸಬೇಕು ಎಂದು ತಿಳಿಸಿದೆ.
ನೋಂದಣಿ ಆಗದಿರುವ ಆಸ್ಪತ್ರೆಗಳು ರೆಮ್ಡಿಸಿವಿರ್ ಔಷಧ ಮತ್ತು ವೈದ್ಯಕೀಯ ಆಮ್ಲಜನಕಕ್ಕೆ ಆನ್ಲೈನ್ನಲ್ಲಿ ಬೇಡಿಕೆ ಸಲ್ಲಿಸಲು ಸಾಧ್ಯವಾಗುವುದಿಲ್ಲ. ನೋಂದಣಿ ಇಲ್ಲದ ಆಸ್ಪತ್ರೆಗಳಿಗೆ ಔಷಧ ಹಾಗೂ ಆಮ್ಲಜನಕ ಪೂರೈಕೆ ಸಾಧ್ಯವಿಲ್ಲ ಎಂದು ಹೇಳಿದೆ.
ಹಾಗೆಯೇ ರೋಗಿಗಳಿಂದ ಹಾಗೂ ವಿವಿಧ ಸಂಘ ಸಂಸ್ಥಗಳಿಂದ ನೇರವಾಗಿ ರೆಮ್ಡಿಸಿವಿರ್ ಔಷಧ ಬೇಡಿಕೆ ಬಂದರೂ ಪರಿಗಣಿಸಲಾಗುವುದಿಲ್ಲ. ಸಂಬಂಧಪಟ್ಟ ಆಸ್ಪತ್ರೆ ಹಾಗೂ ವೈದ್ಯರ ಮುಖಾಂತರ ವೆಬ್ಲಿಂಕ್ ಮೂಲಕ ಬೇಡಿಕೆ ಸಲ್ಲಿಸಿದರೆ ಮಾತ್ರ ರೆಮ್ಡಿಸಿವಿರ್ ಔಷಧವನ್ನು ನೇರವಾಗಿ ಆಸ್ಪತ್ರೆಗೆ ಸರಬರಾಜು ಮಾಡಲಾಗುತ್ತದೆ ಎಂದು ತಿಳಿಸಿದೆ.