ಬೆಂಗಳೂರು, ಮೇ 02 (DaijiworldNews/MB) : ''ಮಸ್ಕಿ ಕ್ಷೇತ್ರದಲ್ಲಿ ನಾವು ಭರ್ಜರಿ ಜಯ ಗಳಿಸಿದ್ದೇವೆ. ಆದರೆ ಕೊರೊನಾ ಕಾರಣದಿಂದಾಗಿ ಯಾರೂ ಕೂಡಾ ಸಂಭ್ರಮಾಚರಣೆ ಮಾಡಬಾರದು. ಕೊರೊನಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು'' ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಉಪ ಚುನಾವಣೆ ಫಲಿತಾಂಶದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ನಾವು ಸೋಲನ್ನು ಒಪ್ಪಬೇಕು, ಗೆಲುವನ್ನು ಒಪ್ಪಬೇಕು. ಇದು ಪ್ರಜಾಪ್ರಭುತ್ವದ ನಿಯಮ. ಈ ಕೊರೊನಾ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಯಾರೂ ಗೆಲುವಿನ ಸಂಭ್ರಮಾಚರಣೆ ಮಾಡಬಾರದು'' ಎಂದು ಹೇಳಿದ್ದಾರೆ.
''ನಾನು ಈಗಾಗಲೇ ಮಸ್ಕಿ ಕ್ಷೇತ್ರದ ಅಭ್ಯರ್ಥಿ ತುರುವಿಹಾಳ ಅವರಿಗೆ ಕರೆ ಮಾಡಿ ಅಭಿನಂದನೆ ತಿಳಿಸಿದ್ದೇನೆ. ಯಾರೂ ಸಂಭ್ರಮ ಮಾಡದಂತೆ ಸೂಚನೆ ನೀಡಿದ್ದೇನೆ'' ಎಂದು ತಿಳಿಸಿದ ಅವರು, ''ಹೊರ ರಾಜ್ಯದ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಸೋಲು, ಡಿಎಂಕೆ ಗೆಲುವು ಇದ್ಯಾವುದನ್ನು ನಾವು ಈ ಕೊರೊನಾ ಸಂದರ್ಭ ಸಂಭ್ರಮಿಸುವುದು ಬೇಡ. ಬಿಜೆಪಿಗರು ಮಮತಾ ಬ್ಯಾನರ್ಜಿ ಅವರಿಗೆ ಕೊಡಬಾರದ ಕಾಟ ಕೊಟ್ಟಿದ್ದಾರೆ. ಇಷ್ಟಾದರೂ ಪಶ್ಚಿಮ ಬಂಗಾಳದ ಜನ ಮಮತಾ ಕೈ ಹಿಡಿದಿದ್ದಾರೆ'' ಎಂದು ಹೇಳಿದರು.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರು, ''ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವನಗೌಡ ತುರವಿಹಾಳ ಅವರಿಗೆ ಅಭಿನಂದನೆಗಳು. ತುರುವಿಹಾಳ ಅವರಿಗೆ ಆಶೀರ್ವಾದ ಮಾಡಿದ ಕ್ಷೇತ್ರದ ಮತದಾರರಿಗೆ ಹೃದಯಪೂರ್ವಕ ಕೃತಜ್ಞತೆ ಗಳನ್ನು ಸಲ್ಲಿಸುತ್ತೇನೆ'' ಎಂದು ಹೇಳಿದ್ದಾರೆ.
''ಮಸ್ಕಿಯಲ್ಲಿ ಬಸನಗೌಡ ತುರುವಿಹಾಳ ಗೆಲುವಿಗೆ ಶ್ರಮಿಸಿದ ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಕೊರೊನಾದಿಂದಾಗಿ ದೇಶ ಹಾಗೂ ರಾಜ್ಯ ಸೂತಕದ ಮನೆಯಾಗಿರುವುದರಿಂದ ಪಕ್ಷದ ಕಾರ್ಯರ್ತರು ವಿಜಯೋತ್ಸವ ನಡೆಸದೆ ಸಂಯಮದಿಂದ ವರ್ತಿಸಬೇಕೆಂದು ಮನವಿ ಮಾಡುತ್ತೇನೆ'' ಎಂದು ಕೂಡಾ ಟ್ವೀಟ್ ಮಾಡಿದ್ದಾರೆ.