ಕಾರವಾರ, ಮೇ.02 (DaijiworldNews/HR): ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆಗಾಗಿ ವೆಸ್ಟರ್ನ್ ನೇವಲ್ ಕಮಾಂಡ್ ಕಾರವಾರ ಸೇರಿದಂತೆ ಮೂರು ನೆವೆಲ್ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗಾಗಿ ಆಕ್ಸಿಜನ್ ಸಹಿತ ಬೆಡ್ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ಈಗಾಗಲೇ ಕೆಲವೆಡೆ ಬೆಡ್ಗಳು ಸಿಗದೇ ಸೋಂಕಿತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಕಾರಣದಿಂದಾಗಿ ವೆಸ್ಟರ್ನ್ ನೇವಲ್ ಕಮಾಂಡ್ಗೆ ಒಳಪಡುವ ಗೋವಾದ ಭಾರತೀಯ ನೌಕಾ ಆಸ್ಪತ್ರೆ ಸೇವೆಜೀವಂತಿ, ಕರ್ನಾಟಕ ಕಾರವಾರದ ಐಎನ್ಎಚ್ಎಸ್ ಪತಂಜಲಿ ಹಾಗೂ ಮುಂಬೈನ ಐಎನ್ಎಚ್ಎಸ್ ಸಂಧಾನಿಯಲ್ಲಿ ನಾಗರಿಕ ಆಡಳಿತವು ಬಳಸಿಕೊಳ್ಳಲು ಈಗಾಗಲೇ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಇನ್ನು ಮುಂಬೈನಲ್ಲಿ ವಲಸೆ ಕಾರ್ಮಿಕರು ತಮ್ಮೂರಿಗೆ ತೆರಳುವುದನ್ನು ತಡೆಯಲು ನೌಕಾನೆಲೆಯ ಆವರಣದೊಳಗೆ ಮೂಲಭೂತ ಸೌಕರ್ಯಗಳನ್ನು, ಸಕಲ ಸೌಲಭ್ಯಗಳನ್ನು ಕೂಡ ಒದಗಿಸಲಾಗಿದೆ.
ಕಾರವಾರದಲ್ಲಿನ ನೌಕಾ ಅಧಿಕಾರಿಗಳು ಕೂಡ ಸುಮಾರು 1,500 ವಲಸೆ ಕಾರ್ಮಿಕರಿಗಾಗುವಷ್ಟು ಅಗತ್ಯ ವಸ್ತುಗಳು, ಪಡಿತರ ಮತ್ತು ಮೂಲ ಆರೋಗ್ಯ ಸೇವೆಗಳನ್ನು ಒದಗಿಸಲು ವ್ಯವಸ್ಥೆಗಳನ್ನು ಮಾಡಿದ್ದಾರೆ ಎನ್ನಲಾಗಿದೆ.