ಚೆನ್ನೈ, ಮೇ 02 (DaijiworldNews/MB) : ದೇಶದಲ್ಲಿ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮಧ್ಯಾಹ್ನದ ವೇಳೆ ಸ್ಪಷ್ಟವಾಗಲಿದೆ. ಏತನ್ಮಧ್ಯೆ ತಮಿಳುನಾಡು ವಿಧಾನಸಭಾ ಕ್ಷೇತ್ರದ ಮತ ಎಣಿಕೆಯ ಈವರೆಗಿನ ಪ್ರಗತಿ ಗಮನಿಸಿದರೆ ಡಿಎಂಕೆ ಪಕ್ಷ ಮ್ಯಾಜಿಕ್ ನಂಬರ್ ದಾಟಿದ್ದು ಡಿಎಂಕೆಯ ಎಂ.ಕೆ.ಸ್ಟಾಲಿನ್ ಗದ್ದುಗೆ ಏರುವುದು ಬಹುತೇಕ ಖಚಿತವಾಗಿದೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು 118 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದೆ.
ಪ್ರಸ್ತುತ ಡಿಎಂಕೆ ಪಕ್ಷ ಮ್ಯಾಜಿಕ್ ನಂಬರ್ 118 ಸ್ಥಾನಗಳನ್ನು ದಾಟಿ 140 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ದಶಕದ ಬಳಿಕ ಡಿಎಂಕೆ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರಲು ಸಿದ್ದವಾಗುತ್ತಿದೆ. ಹಾಗೆಯೇ ಅಧಿಕಾರ ಆಡಳಿತಾರೂಢ ಎಐಡಿಎಂಕೆ ಪಕ್ಷದ ಕೈ ಜಾರಿ ಡಿಎಂಕೆ ತೆಕ್ಕೆಗೆ ಸೇರುವ ಸಾಧ್ಯತೆ ಅಧಿಕವಾಗಿದೆ.
ಆಡಳಿತಾರೂಢ ಎಐಎಡಿಎಂಕೆ ಭಾರೀ ಹಿನ್ನೆಡೆ ಸಾಧಿಸಿದ್ದು ಮುಖ್ಯಮಂತ್ರಿ ಪಳನಿಸ್ವಾಮಿ ಅಧಿಕಾರವನ್ನು ಸ್ಟಾಲಿನ್ಗೆ ಬಿಟ್ಟುಕೊಡಬೇಕಾದ ಸ್ಥಿತಿ ಎದುರಾಗುವ ಸಾಧ್ಯತೆ ಕಂಡು ಬರುತ್ತಿದೆ.