ನವದೆಹಲಿ, ಮೇ.02 (DaijiworldNews/HR): ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಸಾವು ಸಂಭವಿಸುತ್ತಿರುವುದಕ್ಕೆ ಚುನಾವಣಾ ಆಯೋಗವೇ ಕಾರಣ ಹಾಗಾಗಿ ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬಹುದು ಎಂದು ಹೇಳಿದ್ದ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ಆಯೋಗವು ಇದೀಗ ಸುಪ್ರೀಂ ಕೊರ್ಟ್ ಮೆಟ್ಟಿಲೇರಿದೆ.
ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ರಾಜಕೀಯ ಪಕ್ಷಗಳು ಸಮಾವೇಶಗಳನ್ನು ನಡೆಸಿ, ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುವುದಕ್ಕೆ ಕಾರಣವಾಗುವಂತೆ ಮಾಡಿದ್ದ ಚುನಾವಣಾ ಆಯೋಗ, ಈ ಆಯೋಗದ ಬೇಜವಾಬ್ದಾರಿಯಿಂದಲೇ ದೇಶದಲ್ಲಿ ದುರಂತಗಳು ಹೆಚ್ಚುತ್ತಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದ್ದು, ಅಲ್ಲದೇ ಚುನಾವಣಾ ಆಯೋಗದ ವಿರುದ್ಧ ಕೊಲೆ ಕೇಸ್ ದಾಖಲಿಸಬಹುದು ಎಂದು ಹೇಳಿತ್ತು.
ಇನ್ನು ಇದರ ಬೆನ್ನಲ್ಲೇ ಮಾಧ್ಯಮಗಳಲ್ಲಿ ಈ ಸುದ್ದಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ, ಕೋರ್ಟ್ ವಿಚಾರಣೆ ವೇಳೆ ವ್ಯಕ್ತಪಡಿಸಿದ ಅಭಿಪ್ರಾಯವನ್ನೇ ಪ್ರಮುಖವಾಗಿರಿಸಿಕೊಂಡು ಹೇಳಿಕೆಯನ್ನು ವರದಿ ಮಾಡದಂತೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂ ಮೆಟ್ಟಿಲೇರಿದೆ.