ಕೊಲ್ಕತ್ತಾ, ಮೇ 02 (DaijiworldNews/MB) : ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಾಗೂ ಬಿಜೆಪಿ ನಡುವೆ ಭಾರೀ ಪೈಪೋಟಿ ಇದೆ. ಆದರೆ ಟಿಎಂಸಿ ನಾಯಕಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಿನ್ನೆಲೆ ಕಾಯ್ದುಕೊಂಡಿದ್ದಾರೆ. ಬಿಜೆಪಿಯ ಸುವೇಂದು ಅಧಿಕಾರಿಯ ಎದುರು ದೀದಿ ಸೋಲು ಅನುಭವಿಸಲಿದ್ದಾರಾ ಎಂಬ ಅನುಮಾನ ಮೂಡಿಸಿದೆ.
294 ಸದಸ್ಯ ಬಲದ ಪಶ್ಚಿಮಬಂಗಾಳ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು 148 ಸ್ಥಾನಗಳ ಅಗತ್ಯವಿದೆ. ಟಿಎಂಸಿ ಮ್ಯಾಜಿಕ್ ನಂಬರ್ 148 ಅನ್ನು ದಾಟಿ ಅಧಿಕ ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಇತ್ತ ಬಿಜೆಪಿ 116 ಕ್ಕೂ ಅಧಿಕ ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಆದರೆ ಏತನ್ಮಧ್ಯೆ ಟಿಎಂಸಿ ನಾಯಕಿ ದೀದಿ 8 ಸಾವಿರ ಮತಗಳ ಹಿನ್ನಡೆಯನ್ನು ಸಾಧಿಸಿದ್ದಾರೆ.
ಟಿಎಂಸಿ ಮುನ್ನಡೆ ಸಾಧಿಸುವ ಮೂಲಕ ಸಂತಸ ಪಡುವ ಹೊತ್ತಿನಲ್ಲೇ ದೀದಿ ಹಿನ್ನೆಡೆಯು ಟಿಎಂಸಿ ಪಕ್ಷಕ್ಕೆಯೇ ಭಾರೀ ಮುಖಭಂಗವನ್ನುಂಟು ಮಾಡಿದೆ. ಒಂದು ವೇಳೆ ದೀದಿ ಸೋತು ಟಿಎಂಸಿ ಬಹುಮತ ಸಾಧಿಸಿದರೆ ಯಾರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಪ್ರಶ್ನೆಯೂ ಕೂಡಾ ಮೂಡಿದೆ.
ಈ ನಡುವೆ ಕಾಂಗ್ರೆಸ್ ಮೈತ್ರಿಕೂಟ ಕೂಡಾ ಭಾರೀ ಹಿನ್ನೆಡೆ ಅನುಭವಿಸಿದೆ. ಸಿಪಿಎಂ ಪಕ್ಷ 4 ಸ್ಥಾನದಲ್ಲಿ, ಇತರೆ 3 ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ.
ಪಶ್ಚಿಮಬಂಗಾಳದಲ್ಲಿ ಸತತ ಮೂರನೇ ಬಾರಿಗೆ ಮತದಾರರು ದೀದಿ ಕೈಹಿಡಿಯುತ್ತಾರಾ ಅಥವಾ ಮೋದಿ ಕೈ ಹಿಡಿಯುತ್ತಾರಾ ಎಂದು ಇನ್ನು ಕೆಲವೇ ಗಂಟೆಗಳಲ್ಲಿ ಸ್ಪಷ್ಟವಾಗಲಿದೆ.