ನವದೆಹಲಿ, ಮೇ 02 (DaijiworldNews/MB) : ದೇಶದಲ್ಲಿ ಮೇ 1ರಿಂದ ಮೂರನೇ ಹಂತದ ಲಸಿಕೆ ಅಭಿಯಾನದ ಭಾಗವಾಗಿ 18–44 ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ನೀಡಲಾಗಿದ್ದು ಮೊದಲ ದಿನ ಒಟ್ಟು 84,599 ಜನರು ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.
ದೇಶದ ಹಲವು ರಾಜ್ಯದಲ್ಲಿ ಕೊರೊನಾ ಲಸಿಕೆಯ ಕೊರತೆ ಕಾಣಿಸಿಕೊಂಡಿದೆ. ಈ ಹಿಂದಿನ ಹಂತದಲ್ಲಿ ಕೇಂದ್ರ ಸರ್ಕಾರವೇ ಪೂರೈಸುತ್ತಿದ್ದ ಕೊರೊನಾ ಲಸಿಕೆಯನ್ನು ಈಗ ರಾಜ್ಯ ಸರ್ಕಾರದ ಉಸ್ತುವಾರಿಗೆ ನೀಡಿದೆ. ಸ್ವಯಂ ಸೇವಕರು ಮತ್ತು ಎನ್ಜಿಒಗಳನ್ನು ಬಳಸಿ ಸಹಾಯ ಕೇಂದ್ರಗಳನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಕರ್ನಾಟಕ ಸೇರಿದಂತೆ ಕೆಲವೆಡೆ ಶನಿವಾರ ಸಾಂಕೇತಿಕವಾಗಿ ಲಸಿಕೆ ಅಭಿಯಾನ ಆರಂಭಿಸಲಾಗಿದ್ದು ದೆಹಲಿಯಲ್ಲಿ ಸೋಮವಾರ ಲಸಿಕೆ ಅಭಿಯಾನ ಆರಂಭವೆಂದು ತಿಳಿಸಿದೆ. ಇನ್ನು ಈಗಾಗಲೇ ಹಲವು ರಾಜ್ಯಗಳು ಉಚಿತ ಲಸಿಕೆ ಘೋಷಣೆ ಮಾಡಿದೆ.
ಶನಿವಾರದ ದಿನ ಲಸಿಕೆ ಹಾಕಿಸಿಕೊಂಡಿರುವವರ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ, ಶನಿವಾರ ರಾತ್ರಿ 8ರವರೆಗೂ ಒಟ್ಟು 16,48,192 ಡೋಸ್ ಲಸಿಕೆ ಹಾಕಲಾಗಿದೆ. 18–44 ವರ್ಷ ವಯಸ್ಸಿನವರು 84,599 ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಇದೇ ಅವಧಿಯಲ್ಲಿ ಒಟ್ಟು 9,89,700 ಜನರು ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. 6.58 ಲಕ್ಷಕ್ಕೂ ಹೆಚ್ಚು ಜನರು ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಒಟ್ಟು 15.66 ಕೋಟಿ ಡೋಸ್ಗಳಷ್ಟು ಲಸಿಕೆ ಹಾಕಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ 5.26 ಕೋಟಿ ಜನರು ಮೊದಲ ಡೋಸ್ ತೆಗೆದುಕೊಂಡಿದ್ದರೆ, 1.14 ಕೋಟಿ ಜನರು ಎರಡನೇ ಡೋಸ್ ಪಡೆದುಕೊಂಡಿದ್ದಾರೆ. 45ರಿಂದ 60 ವರ್ಷ ವಯಸ್ಸಿನವರಲ್ಲಿ ಈವರೆಗೆ 5.33 ಕೋಟಿ ಜನರು ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡಿದ್ದರೆ, 40 ಲಕ್ಷ ಜನರು ಎರಡನೇ ಡೋಸ್ ಪಡೆದುಕೊಂಡಿದ್ದಾರೆ.