ಬೆಂಗಳೂರು, ಮೇ. 01 (DaijiworldNews/HR): ಆಂಧ್ರ ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕೊರೊನಾ ಸೋಂಕಿತರ ಚಿಕಿತ್ಸೆ ವೆಚ್ಚವನ್ನು ಆರೋಗ್ಯ ಶ್ರೀ ಯೋಜನೆಯಡಿಯಲ್ಲಿ ಅಲ್ಲಿನ ಸರ್ಕಾರವೇ ಭರಿಸಿದ್ದು, ಅಂತೆಯೇ ಕರ್ನಾಟಕದಲ್ಲೂ ಕೊರೊನಾ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಪತ್ರ ಬರೆದಿರುವ ಖಂಡ್ರೆ, "ಕರ್ನಾಟಕದಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿರುವ ಸಾವಿರಾರು ರೋಗಿಗಳಿಗೆ ಆಸ್ಪತ್ರೆ ಸಿಗುತ್ತಿಲ್ಲ, ಸಿಕ್ಕರೂ ಆಕ್ಸಿಜನ್ ಹಾಸಿಗೆ ಸಿಗುತ್ತಿಲ್ಲ, ವೆಂಟಿಲೇಟರ್ ದೊರಕುತ್ತಿಲ್ಲ, ಐಸಿಯು ಲಭ್ಯವೇ ಇಲ್ಲ ಈ ಪರಿಸ್ಥಿತಿ ಸುಧಾರಣೆ ಮಾಡಬೇಕು" ಎಂದರು.
"ಖಾಸಗಿ ಆಸ್ಪತ್ರೆಗಳಲ್ಲಿ ಹಗಲು ಲೂಟಿ ನಡೆಯುತ್ತಿದ್ದು, ಎಚ್ಆರ್ ಸಿಟಿ ಸ್ಕ್ಯಾನ್ ಗೆ 5-6 ಸಾವಿರ ರೂ, ರೆಮಿಡಿಸಿವೀರ್ ಗೆ 15-20 ಸಾವಿರ ರೂ., ಆಕ್ಸಿಜನ್ ಬೆಡ್, ವೆಂಟಿಲೇಟರ್ ಗೆ 20 -25 ಸಾವಿರಾರು ರೂ ಮತ್ತು ಐಸಿಯುಗೆ ಲಕ್ಷಗಟ್ಟಲೆ ಬಿಲ್ ಮಾಡಲಾಗುತ್ತಿದ್ದು, 5-6 ದಿನಗಳ ಚಿಕಿತ್ಸೆಗೆ 8-10 ಲಕ್ಷ ರೂ. ಬಿಲ್ ಮಾಡುತ್ತಿದ್ದಾರೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದವರು ಕಷ್ಟದಲ್ಲಿದ್ದಾರೆ, ಹಾಗಾಗಿ ಸರ್ಕಾರವೇ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಸಂಪೂರ್ಣ ವೆಚ್ಚ ಭರಿಸಬೇಕು" ಎಂದಿದ್ದಾರೆ.
ಇನ್ನು "ರಾಜ್ಯ ಸರ್ಕಾರವೂ ಆಂಧ್ರ ಪ್ರದೇಶ ಮಾದರಿ ಅನುಸರಿಸಬೇಕು, ಈ ಕೂಡಲೇ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಉಚಿತ ಚಿಕಿತ್ಸೆಯ ಆದೇಶ ಹೊರಡಿಸಬೇಕು" ಎಂದು ಹೇಳಿದ್ದಾರೆ.