ಬೆಂಗಳೂರು, ಮೇ.01 (DaijiworldNews/PY): "ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳು, ಅವಶ್ಯವಿರುವ ಔಷಧಿಗಳ ಲಭ್ಯತೆಯ ವಿವರಗಳನ್ನು ಎಲ್ಲಾ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು" ಎಂದು ರಾಜ್ಯ ಸರ್ಕಾರ ಆದೇಶಿಸಿದೆ.
ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಸುತ್ತೋಲೆ ಅಧಿಸೂಚನೆ ಹೊರಡಿಸಿದ್ದು, "ಸರ್ಕಾರವು ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ತನ್ನಲ್ಲಿರುವ ಶೇ.50ರಷ್ಟು ಹಾಸಿಗೆಗಳನ್ನು ಕೊರೊನಾ ಸೋಂಕಿನ ಚಿಕಿತ್ಸೆಗಾಗಿ ಸಾರ್ವಜನಿಕ ಆರೋಗ್ಯ ಸೇವಾ ಸಂಸ್ಥೆಗಳಿಂದ ಉಲ್ಲೇಖಿತ ರೋಗಿಗಳಿಗೆ ಕಾಯ್ದಿರಿಸಲು ಅಧಿಸೂಚನೆ ಹೊರಡಿಸಲಾಗಿದೆ" ಎಂದು ತಿಳಿಸಿದ್ದಾರೆ.
"ಹಾಸಿಗೆಗಳನ್ನು ಬಿಬಿಎಂಪಿಯ ಕೇಂದ್ರೀಕೃತ ಹಂಚಿಕೆ ವ್ಯವಸ್ಥೆಯ ಮುಖೇನ ಹಂಚಿಕೆ ಮಾಡಿದ್ದರೂ ಕೂಡಾ, ಹಲವು ರೋಗಿಗಳಿಗೆ ಹಾಸಿಗೆ ಪಡೆಯುವಲ್ಲಿ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದರಿಂದಾಗಿ ರೋಗಿಗಳಿಗೆ ಕಷ್ಟವಾಗುತ್ತಿದೆ. ಹಾಗಾಗಿ ರಾಜ್ಯದಲ್ಲಿ ಕೆಪಿಎಂಇ ಕಾಯ್ದೆಯಡಿ ನೋಂದಾಯಿತ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮ ಹಾಸಿಗೆ ಹಂಚಿಕೆ ವಿವರವುಳ್ಳ ಪ್ರದರ್ಶನ ಫಲಕಗಳನ್ನು ತಮ್ಮ ಸ್ವಾಗತ ಮೇಜಿನ ಬಳಿಯಲ್ಲಿಯೇ ಕಡ್ಡಾಯವಾಗಿ ಪ್ರದರ್ಶಿಸಬೇಕು" ಎಂದು ಆದೇಶಿಸಿದ್ದಾರೆ.