ತೆಲಂಗಾಣ, ಮೇ.01 (DaijiworldNews/PY): ತೆಲಂಗಾಣ ಆರೋಗ್ಯ ಸಚಿವ ಈಟಾಲಾ ರಾಜೇಂದರ್ ಅವರನ್ನು ಭೂ ಕಬಳಿಕೆ ಆರೋಪದ ಹಿನ್ನೆಲೆ ಶನಿವಾರ ಹುದ್ದೆಯಿಂದ ತೆಗೆದುಹಾಕಲಾಗಿದ್ದು, ಈ ಹುದ್ದೆಯನ್ನು ಸಿಎಂ ಕೆ.ಚಂದ್ರಶೇಖರ್ ರಾವ್ ಅವರು ವಹಿಸಿಕೊಳ್ಳಲಿದ್ದಾರೆ.
ಈ ಬಗ್ಗೆ ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರ ಕಚೇರಿಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, "ತೆಲಂಗಾಣ ಸಿಎಂ ಅವರ ಸಲಹೆಯ ಮೇರೆಗೆ ರಾಜ್ಯಪಾಲರು ವೈದ್ಯಕೀಯ, ಆರೋಗ್ಯ ಕಲ್ಯಾಣ ಖಾತೆಯನ್ನು ಈಟಾಲಾ ರಾಜೇಂದ್ರ್ ಅವರಿಂದ ಕೂಡಲೇ ಜಾರಿಗೆ ಬರುವಂತೆ ಸಿಎಂ ಅವರಿಗೆ ವರ್ಗಾಯಿಸಲು ಅನುಮೋದನೆ ನೀಡಿದ್ದಾರೆ" ಎಂದು ಹೇಳಿದೆ.
"ಮಸಾಯಿಪೇಟ್ ಮಂಡಲದ ಅಚಂಪೆಟ್ ಗ್ರಾಮದ ಹೊರವಲಯದಲ್ಲಿ ಈಟಾಲಾ ತಮ್ಮ ಭೂಮಿಯನ್ನು ಬಲವಂತವಾಗಿ ಆಕ್ರಮಿಸಿಕೊಂಡಿದ್ದಾರೆ ಎಂದು ಮೇದಕ್ ಜಿಲ್ಲೆಯ ಹಲವಾರು ರೈತರು ಆರೋಪಿಸಿದ್ದಾರೆ ಎಂದು ಎಪ್ರಿಲ್ 30ರಂದು ಹಲವಾರು ತೆಲುಗು, ಚಾನೆಲ್ಗಳು ವರದಿ ಮಾಡಿವೆ. ಈಟಾಲಾ ಹಾಗೂ ಅವರ ಅನುಯಾಯಿಗಳು ತಮ್ಮ ನಿಯೋಜಿತ ಭೂಮಿಗಳಲ್ಲಿ ಸುಮಾರು 100 ಎಕರೆಗಳನ್ನು ಬಲವಂತವಾಗಿ ಆಕ್ರಮಿಸಿಕೊಂಡಿದ್ದಾರೆ ಎಂದು ಸಿಎಂ ಕೆ.ಚಂದ್ರಶೇಖರ್ ರಾವ್ ಅವರಿಗೆ ರೈತರು ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಆರೋಪಗಳು ಬರುತ್ತಿದ್ದ ತಕ್ಷಣವೇ, ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಆರೋಪಗಳ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ ಎಂದು ಸಿಎಂ ಕಚೇರಿ ಘೋಷಿಸಿತ್ತು. ಮೇದಕ್ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸುವಂತೆ ಸಿಎಂ ಅವರು ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ಗೆ ಸೂಚಿಸಿದ್ದಾರೆ. ಅಲ್ಲದೇ ಆರೋಪಗಳ ವಿಚಾರವಾಗಿ ತನಿಖೆ ನಡೆಸುವಂತೆ ಮಹಾನಿರ್ದೇಶಕ ಬಾಲಚಂದ್ರ ರಾವ್ ಅವರಿಗೆ ಕೂಡ ಸೂಚಿಸಲಾಗಿದೆ.
ಆದರೆ, ಈ ಆರೋಪಗಳನ್ನು ನಿರಾಕರಿಸಿದ ಈಟಾಲಾ ಅವರು ಪತ್ರಿಕಾಗೋಷ್ಠಿ ನಡೆಸಿದ್ದರು. "ಮಾಧ್ಯಮಗಳನ್ನು ನನ್ನನ್ನು ಗುರಿಯಾಗಿಸಿಕೊಂಡು, ಈ ರೀತಿಯಾಗಿ ಆರೋಪಗಳನ್ನು ಮಾಡುತ್ತಿವೆ. ತನಿಖೆಗೆ ಆದೇಶಿಸುವ ಸಿಎಂ ಅವರ ತೀರ್ಮಾನವನ್ನು ಸ್ವಾಗತಿಸಿದ ಅವರು, ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ" ಎಂದಿದ್ದಾರೆ.
ಈಟಲಾ ಅವರ ಗ್ರಾಮವದ ವಾರಂಗಲ್ನ ಕಮಲಾಪುರದಲ್ಲಿ ಶನಿವಾರ ಉದ್ವಿಗ್ಬ ಪರಿಸ್ಥಿತಿ ಉಂಟಾಗಿದ್ದು, ಕಾನೂನು ಹಾಗೂ ಸಮಸ್ಯೆಗಳಿಗೆ ಹೆದರಿ ಪೊಲೀಸರನ್ನು ನಿಯೋಜಿಸಲಾಯಿತು.
ಈಟಾಲಾ ಅವರು ಕೆಸಿಆರ್ ಸಚಿವ ಸಂಪುಟದಿಂದ ವಜಾಗೊಂಡ ಎರಡನೇ ಆರೋಗ್ಯ ಸಚಿವರಾಗಿದ್ದಾರೆ. ಈ ಹಿಂದೆ ಉಪಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಾಗಿದ್ದ ಶಾಸಕ ಟಿ.ರಾಜಯ್ಯ ಅವರನ್ನು ಭ್ರಷ್ಟಾಚಾರ ಆರೋಪಗಳ ಹಿನ್ನೆಲೆ ವಜಾ ಮಾಡಲಾಗಿತ್ತು.