ನವದೆಹಲಿ, ಮೇ.01 (DaijiworldNews/PY): "ದೇಶದಲ್ಲಿನ ಕೊರೊನಾ ಬಿಕ್ಕಟ್ಟನ್ನು ಎದುರಿಸಲು, ರಾಷ್ಟ್ರೀಯ ನೀತಿಯನ್ನು ರೂಪಿಸಲು ರಾಜಕೀಯ ಒಮ್ಮತ ಬೆಳೆಸಬೇಕು" ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ವಿಡಿಯೋ ಸಂದೇಶದಲ್ಲಿ ಮಾತನಾಡಿದ ಅವರು, "ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ತಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು. ದೇಶದ ಎಲ್ಲಾ ನಾಗರಿಕರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡಬೇಕು. ಸರ್ಕಾರವು, ಲಸಿಕೆಯನ್ನು ಶೀಘ್ರವೇ ನೀಡಲು ಹಾಗೂ ಉತ್ಪಾದನೆಯನ್ನು ವೃದ್ದಿಸುವ ನಿಟ್ಟಿನಲ್ಲಿ ಉತ್ಪಾದನ ಕಂಪೆನಿಗಳಿಗೆ ಪರವಾನಗಿಯನ್ನು ನೀಡಬೇಕು" ಎಂದು ತಿಳಿಸಿದ್ದಾರೆ.
"ಕೊರೊನಾ ಬಿಕ್ಕಟ್ಟಿನ ಸಂದರ್ಭ ಪ್ರತೀ ಬಡಕುಟುಂಬಕ್ಕೆ ಕೇಂದ್ರ ಸರ್ಕಾರ ತಲಾ 6 ಸಾವಿರ ರೂ. ನೀಡಬೇಕು. ಇಲ್ಲವಾದಲ್ಲಿ ಬಡ ಕುಟುಂಬಗಳಿಗೆ ಜೀವನ ಸಾಗಿಸಲು ಕಷ್ಟವಾಗುತ್ತದೆ" ಎಂದು ಹೇಳಿದ್ದಾರೆ.
"ಕೊರೊನಾ ಔಷಧಿಗಳು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದು, ಇದನ್ನು ತಡೆಯಲು ತಪಾಸಣಾ ಕ್ರಮಗಳನ್ನು ಹೆಚ್ಚಿಸಬೇಕು. ಇಂತಹ ಸಂದರ್ಭ ಕಾಂಗ್ರೆಸ್ ಪಕ್ಷ ಸರ್ಕಾರದೊಂದಿಗೆ ನಿಲ್ಲುತ್ತಿದ್ದು, ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ" ಎಂದು ತಿಳಿಸಿದ್ದಾರೆ.