ಬೆಂಗಳೂರು, ಮೇ 1 (DaijiworldNews/MS): ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್ ಕಿಡಿಕಾರಿದ್ದು, " ಪ್ರಧಾನಿ ಮೋದಿ ಪ್ರಜೆಗಳ ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದು " ಪ್ರಧಾನಿ ಮೋದಿ ಪ್ರಜೆಗಳ ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ, ವಾಸ್ತವ ಮರೆಮಾಚಿ ಸಂಕಷ್ಟದಲ್ಲಿಯೂ ವ್ಯಾಕ್ಸಿನ್ ಅಭಿಯಾನ ಎಂಬ ವರ್ಚಸ್ಸು ಉಳಿಸಿಕೊಳ್ಳುವ ಪ್ರಚಾರದ ಸರ್ಕಸ್ಸು ನಡೆಸುತ್ತಿದ್ದಾರೆ. 17 ರಾಜ್ಯಗಳಲ್ಲಿ ಲಸಿಕೆಗಳೇ ಇಲ್ಲ ವಾಸ್ತವ ಮರೆಮಾಚಿ ಸಂಕಷ್ಟದಲ್ಲಿಯೂ ವ್ಯಾಕ್ಸಿನ್ ಅಭಿಯಾನ ಎಂಬ ವರ್ಚಸ್ಸು ಉಳಿಸಿಕೊಳ್ಳುವ ಪ್ರಚಾರದ ಸರ್ಕಸ್ಸು ನಡೆಸುತ್ತಿದ್ದಾರೆ ಎಂದು ಟೀಕಿಸಿದೆ.
ಕೇಂದ್ರ ಸರ್ಕಾರದ ದಮನಕಾರಿ ನೀತಿಯ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿಕಾರಿದೆ. ಅವ್ಯವಸ್ಥೆ, ಆಕ್ರೋಶ, ಕುಂದು ಕೊರತೆ, ನೋವು, ಹತಾಶೆಗಳನ್ನು ಹಂಚಿಕೊಳ್ಳುವ ಜನರ ಮೇಲೆ ಕೇಸ್ ಹಾಕುವ, ಪೋಸ್ಟ್ಗಳನ್ನು ಡಿಲೀಟ್ ಮಾಡಿಸುವ ಮೂಲಕ ಅಭಿವ್ಯಕ್ತಿ ಸ್ವತಂತ್ರವನ್ನು ಹತ್ತಿಕ್ಕಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮೋದಿ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಇನ್ನು ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದಿರುವ ಕಾಂಗ್ರೆಸ್ " ಬಿಜೆಪಿಯದ್ದು ಸಮಯಕ್ಕೆ ತಕ್ಕಂತೆ ಸುಳ್ಳು, ಸಂದರ್ಭಕ್ಕೆ ತಕ್ಕಂತೆ ವಂಚನೆ. ಹಿಂದೆ ಏನು ಹೇಳಿದ್ದೇವೆ, ಈಗ ಏನು ಹೇಳುತ್ತಿದ್ದೇವೆ ಎಂಬ ಪ್ರಜ್ಞೆ ಇಲ್ಲದೆ ತಮ್ಮ ಸುಳ್ಳುಗಳನ್ನು ತಾವೇ ಬಯಲುಗೊಳಿಸುತ್ತಾರೆ. ರೆಮಿಡಿಸಿವಿರ್ ಕೊರತೆ ಇಲ್ಲ ಎಂದು ಸಮರ್ಥಿಸಿಕೊಂಡಿದ್ದವರು ಈಗ ಆಮದು ಮಾಡಿಕೊಳ್ಳುತ್ತಿರುವುದೇಕೆ ಹೇಳಲು ಸಾಧ್ಯವೇ!? ಎಂದು ಕುಹಕವಾಡಿದೆ.