ಬೆಂಗಳೂರು, ಮೇ 01 (DaijiworldNews/MB) : ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಅಭಿಯಾನಕ್ಕೆ ರಾಜ್ಯದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿದರು. ಈ ಸಾಂಕೇತಿಕ ಚಾಲನೆ ವಿರುದ್ದ ಕಿಡಿಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರು, ''ಬರೀ ಫೋಟೋಗಾಗಿ ಬಿಎಸ್ವೈ ಅಭಿಯಾನ ಆರಂಭಿಸಿದ್ದಾರೆ. ಅದನ್ನು ಮಾಧ್ಯಮದವರು ತೋರಿಸಿದ್ದಾರೆ'' ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ರಾಜ್ಯದಲ್ಲಿ ಈಗ ಲಸಿಕೆ ಕೊರತೆಯಿದ್ದು ಮೇ ಅಂತ್ಯದವರೆಗೂ ಲಸಿಕೆ ಸಿಗುವುದಿಲ್ಲ. ನಾನು ಸತ್ಯವನ್ನು ಹೇಳುತ್ತಿದ್ದೀನಿ, ನಾನು ಸರ್ಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಮಾತನಾಡಿದ್ದೇನೆ. ನಿನ್ನೆಯಷ್ಟೇ ಸುಧಾಕರ್ ಲಸಿಕೆ ಇಲ್ಲವೆಂದು ಹೇಳಿದ್ದಾನೆ'' ಎಂದು ತಿಳಿಸಿದ್ದಾರೆ.
''ಪ್ರಧಾನಿ ಮಾತನಾಡುವಾಗ ಮಾಹಿತಿ ಇತ್ತೋ ಏನೋ ತಿಳಿಯದು. ಪಿಎಂ ಮೇ 1 ರಿಂದ 18 ವಯೋಮಾನದವರಿಗೆ ಲಸಿಕೆ ನೀಡುತ್ತೇವೆ ಎಂದು ಯಾವುದೇ ಪೂರ್ವ ತಯಾರಿ ಇಲ್ಲದೆಯೇ ಭರವಸೆ ನೀಡಿದ್ದಾರೆ. ಪ್ರಧಾನಿ ಬೇಜಾಬ್ದಾರಿ ಹೇಳಿಕೆ ನೀಡುತ್ತಾರೆ. ಅವರ ವಿರುದ್ದ ಮಾತನಾಡಿದರೆ ಪ್ರಧಾನಿ ಹೆಸರು ಎಳೆದು ತರಬೇಡಿ ಎಂದು ಸಿಎಂ ಹೇಳುತ್ತಾರೆ'' ಎಂದು ಆಕ್ರೋಶಗೊಂಡರು.
''ರಾಜ್ಯ ಸರ್ಕಾರ ಯಾವ ಸಿದ್ದತೆ ಮಾಡಿಕೊಂಡಿದ್ದಾರೆ? ಸಿಎಂ ಏನಾಗಿದಾರೆ. ಅವರನ್ನು ಕೇಳದೆ ಯಾರನ್ನು ಕೇಳಬೇಕು'' ಎಂದು ಪ್ರಶ್ನಿಸಿರುವ ಅವರು, ''ನಿಜವಾಗಿ ಈ ಲಸಿಕೆಯನ್ನು ಪೋಲಿಯೋ ಮಾದರಿಯಲ್ಲೇ ನೀಡಬೇಕು. ರಾಜ್ಯದಲ್ಲಿ ಲಸಿಕೆ ಅಭಿಯಾನಕ್ಕೆ 2,000 ಕೋಟಿ ಬೇಕಾಗುತ್ತದೆ. ಮನೆ ಮನೆಗೂ ಲಸಿಕೆ ನೀಡಬೇಕು'' ಎಂದು ಆಗ್ರಹಿಸಿದ್ದಾರೆ.
''ಸರ್ಕಾರ ಆರ್ಥಿಕ ಪ್ಯಾಕೇಜ್ ನೀಡಬೇಕು. ರಾಜ್ಯದಲ್ಲಿ 1.5 ಕೋಟಿ ಸಂಘಟಿತ ಅಸಂಘಟಿತ ಕೆಲಸ ಮಾಡುತ್ತಾರೆ. ಅವರೆಲ್ಲಾ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳಬೇಕಾ? ಎಂತೆಂತಾ ಮಂತ್ರಿಗಳು ಇದ್ದಾರೆ. ಕತ್ತಿ ಹೇಳುದ್ದು ಎಲ್ಲರಿಗೂ ತಿಳಿದಿದೆ ಅಲ್ಲವೇ'' ಎಂದು ಹೇಳಿದರು.
ಇನ್ನು ''ರಾಜ್ಯದಲ್ಲಿ ರೆಮ್ಡಿಸಿವಿರ್ ಇಂಜೆಕ್ಷನ್ ಕೂಡ ದೊರೆಯುತ್ತಿಲ್ಲ. ನನ್ನ ಬಾವ ಮೈದನಿಗೆ ರೆಮಿಡೆಸ್ವಿರ್ ಲಭಿಸಿಲ್ಲ. ನಾನು ಡಿಸಿಎಂ ಅಶ್ವತ್ಥ್ಗೆ ಇಂಜೆಕ್ಷನ್ಗಾಗಿ ಕರೆ ಮಾಡಿದ್ದೆ'' ಎಂದು ಹೇಳಿದ ಅವರು, ''ಉಮೇಶ್ ಜಾಧವ್ಗೆ ಮೂಟೆ ಮೂಟೆ ಲಸಿಕೆ ನೀಡುತ್ತಾರೆ. ಪ್ರಿಯಾಂಕ್ ಖರ್ಗೆ ಕೇಳಿದ್ರೆ ಲಸಿಕೆ ಇಲ್ಲ ಎನ್ನುತ್ತಾರೆ'' ಎಂದು ಆರೋಪಿಸಿದರು.
''ರಾಜ್ಯದಲ್ಲಿ ಆರೋಗ್ಯ ಸಚಿವರು ನಮ್ಮ ಸಂಪರ್ಕಕ್ಕೆ ದೊರೆಯುತ್ತಿಲ್ಲ. ರಾಜ್ಯದಲ್ಲಿ ಅರಾಜಕತೆ ಇದೆ'' ಎಂದು ಕಿಡಿಕಾರಿದ ಅವರು, ಜನರಲ್ಲಿ ಗುಂಪು ಸೇರದಂತೆ ಮನವಿ ಮಾಡಿದರು.