ಬೆಂಗಳೂರು, ಮೇ. 01 (DaijiworldNews/HR): "ಕರ್ನಾಟಕದಲ್ಲಿ ಯಾರಾದರೂ ರೆಮ್ಡೆಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮದೊಂದಿಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕಾ ಅಭಿಯಾನ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,"ಲಸಿಕೆಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆಗೆ ದರ ನಿಗದಿಪಡಿಸಲಾಗಿದ್ದು, ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ಹೇಳಿದ್ದಾರೆ.
ಇನ್ನು "ಕರ್ನಾಟಕಕ್ಕೆ 3 ಲಕ್ಷ ಲಸಿಕೆ ಕೇಂದ್ರ ಸರ್ಕಾರ ಕಳುಹಿಸಿಕೊಟ್ಟಿದ್ದು, ನಮ್ಮ ಬಳಿ 1 ಲಕ್ಷ ಲಸಿಕೆ ಇದೆ. ರಾಜ್ಯದಲ್ಲಿ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು" ಎಂದು ತಿಳಿಸಿದ್ದಾರೆ.