ನವದೆಹಲಿ, ಮೇ.01 (DaijiworldNews/PY): "130 ಕೋಟಿ ಜನರನ್ನು ಹೊತ್ತ ಹಡಗು 2021ರಲ್ಲಿ ಮುಳುಗುತ್ತಿದೆ" ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಅವರು, "ಪ್ರಸ್ತುತ ಆರೋಗ್ಯ ಸಚಿವ ಟ್ವೀಟ್ ಡಿಲೀಟ್ ಆಗಿದೆ. ಮೇ ದಿನ! ಮೇ ದಿನ! 130 ಕೋಟಿ ಜನರನ್ನು ಹೊತ್ತ ಹಡಗು 2021ರಲ್ಲಿ ಮುಳುಗುತ್ತಿದೆ. ನಮ್ಮನ್ನು ಉಳಿಸಿ!, ಕನಿಷ್ಠ ಪಕ್ಷ ನನ್ನನ್ನಾದರೂ ಕಾಪಾಡಿ" ಎಂದಿದ್ದಾರೆ.
ಇನ್ನೊಂದು ಟ್ವೀಟ್ನಲ್ಲಿ, "ಕಾಂಗ್ರೆಸ್ನ ಸಲಹೆಗಳನ್ನು ಸರ್ಕಾರ ಬದಿಗಿಟ್ಟಿದೆ. ಮಾಜಿ ಪ್ರಧಾನಿಯ ಪತ್ರವನ್ನು ಕೂಡಾ ಪ್ರಧಾನಿ ಮೋದಿ ಅವರು ಸ್ವೀಕರಿಸಿಲ್ಲ. ಇನ್ನು ಆರೋಗ್ಯ ಸಚಿವರು ಅಸಭ್ಯವಾಗಿ ವರ್ತಿಸುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 4,01,993 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರ ಜೊತೆ ಆಸ್ಪತ್ರೆಗಳಲ್ಲಿ ಬೆಡ್ನ ಕೊರತೆಯೂ ಆಗಿದೆ" ಎಂದಿದ್ದಾರೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 4,01,993 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 19,164,969 ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ 24 ಗಂಟೆಗಲ್ಲಿ 3,523 ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ವೈರಸ್ ಸೋಂಕಿಗೆ ಮೃತಪಟ್ಟವರ ಸಂಖ್ಯೆ 2,11,853 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 2,97,698 ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಸದ್ಯ ದೇಶದಲ್ಲಿ 32 ಲಕ್ಷ ಕೊರೊನಾ ಸಕ್ರಿಯ ಪ್ರಕರಣಗಳಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.