ನವದೆಹಲಿ, ಮೇ.01 (DaijiworldNews/PY): ಕೊರೊನಾ ಸೋಂಕಿತೆಯೋರ್ವರಿಗೆ ಬೆಡ್ ಸಿಗದೇ ಕಾರಿನಲ್ಲೇ ಮೃತಪಟ್ಟ ಘಟನೆ ನವದೆಹಲಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತರನ್ನು ಜಾಗೃತಿ ಗುಪ್ತಾ (35) ಎಂದು ಗುರುತಿಸಲಾಗಿದೆ. ಇವರು ನೋಯ್ಡಾದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಜಾಗೃತಿ ಅವರ ಪತಿ ಹಾಗೂ ಮಕ್ಕಳು ಮಧ್ಯಪ್ರದೇಶದಲ್ಲಿ ವಾಸವಾಗಿದ್ದಾರೆ.
ಜಾಗೃತಿ ಅವರಿಗೆ ಇತ್ತೀಚೆಗೆ ಕೊರೊನಾ ಸೋಂಕು ತಗುಲಿದ್ದು, ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಕೆ ವಾಸವಾಗಿರುವ ಮನೆಯ ಮಾಲೀಕ ಸರ್ಕಾರಿ ನಿಯಂತ್ರಿತ ಜಿಐಎಂಎಸ್ ಆಸ್ಪತ್ರೆಗೆ ಕರೆದುಕೊಂಡುಹೋಗಿದ್ದಾರೆ. ಈ ವೇಳೆ ಜಾಗೃತಿ ಅವರನ್ನ ಕಾರಿನಲ್ಲಿ ಕೂರಿಸಿ, ಒಂದು ಬೆಡ್ ನೀಡಿ ಎಂದು ಆಸ್ಪತ್ರೆಯ ಸಿಬ್ಬಂದಿಯ ಎದುರು ಗೋಗರೆದಿದ್ದಾರೆ. ಸತತ ಮೂರು ಗಂಟೆ ಕಾದರೂ ಕೂಡಾ ಅವರಿಗೆ ಬೆಡ್ ದೊರೆತಿಲ್ಲ. ಇತ್ತ ಕಾರಿನಲ್ಲಿದ್ದ ಜಾಗೃತಿ ಅವರು ನರಳಾಡಿ ಮೃತಪಟ್ಟಿದ್ದಾರೆ.
ಈ ವೇಳೆ ಜಾಗೃತಿ ಜೊತೆಯಲ್ಲಿದ್ದ ಮನೆ ಮಾಲೀಕ ಆಕೆ ಉಸಿರಾಡುತ್ತಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿದ್ದು, ಕಾರಿನ ಬಳಿ ಬಂದ ಸಿಬ್ಬಂದಿ ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ.