ಬೆಂಗಳೂರು, ಮೇ. 01 (DaijiworldNews/HR): ದೇಶಾದ್ಯಂತ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಿಕೆ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲಸಿಕೆ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನ ಶಿವಾಜಿನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಲಸಿಕಾ ಅಭಿಯಾನಕ್ಕೆ ಸಿಎಂ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, "ನಮ್ಮ ಬಳಿ 1 ಲಕ್ಷ ಲಸಿಕೆ ಸಂಗ್ರಹವಿದ್ದು, ಕೇಂದ್ರದಿಂದ 3 ಲಕ್ಷ ಲಸಿಕೆ ಬಂದಿದ್ದು, ಒಟ್ಟು 4 ಲಕ್ಷ ಡೋಸ್ ಲಸಿಕೆಯಿದೆ. ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಆರಂಭವಾಗಿರುವುದರಿಂದ ಸಾಂಕೇತಿಕವಾಗಿ ರಾಜ್ಯದಲ್ಲೂ ಚಾಲನೆ ನೀಡಲಾಗಿದೆ. ಒಂದೆರಡು ದಿನಗಳಲ್ಲಿ ಇನ್ನಷ್ಟು ಲಸಿಕೆಗಳು ಪೂರೈಕೆಯಾಗಲಿದ್ದು, ಅಭಿಯಾನ ದೊಡ್ಡ ಪ್ರಮಾಣದಲ್ಲಿ ನಿರಂತರ ಮುಂದುವರೆಯಲಿದೆ" ಎಂದರು.
ಇನ್ನು ಈ ಕುರಿತು ಟ್ವೀಟ್ ಮಾಡಿರುವ ಅವರು, "ಕೊರೊನಾ ವಿರುದ್ಧ ಲಸಿಕೆಯೇ ನಮ್ಮ ಸುರಕ್ಷಾ ಕವಚವಾಗಿದೆ. ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಸೂಚನೆಗಳಂತೆ, ಆದ್ಯತೆಯ ಮೇರೆಗೆ ಲಸಿಕೆ ನೀಡಲಾಗುತ್ತಿದೆ. ಅರ್ಹರು ನೋಂದಣಿ ಮಾಡಿಸಿಕೊಂಡು, ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಿರಿ. ಸರ್ಕಾರದೊಂದಿಗೆ ಸಹಕರಿಸಿ, ಎಲ್ಲಾ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿ" ಎಂದು ಮನವಿ ಮಾಡಿಕೊಂಡಿದ್ದಾರೆ.
"ಲಸಿಕೆಯ ಕೊರತೆ ಹಿನ್ನಲೆಯಲ್ಲಿ 18 ವರ್ಷ ಮೇಲ್ಪಟ್ಟವರು ನೊಂದಣಿ ಮಾಡಿಸಿಕೊಂಡಿದ್ದರೂ ಸರ್ಕಾರ ಸೂಚನೆ ಕೊಡುವವರೆಗೆ ದಯವಿಟ್ಟು ಕೇಂದ್ರಗಳ ಹೊರಗೆ ಕ್ಯೂ ನಿಲ್ಲಬೇಡಿ ಎಂದು ಹೇಳಿದ್ದಾರೆ.