ನವದೆಹಲಿ, ಮೇ.01 (DaijiworldNews/PY): "2021-22ನೇ ಆರ್ಥಿಕ ಸಾಲಿನ ರಾಜ್ಯ ವಿಪತ್ತು ನಿರ್ವಹಣಾ ನಿಧಿಯ ಕೇಂದ್ರ ಸರ್ಕಾರದ ಪಾಲಿನ ಮೊದಲ ಕಂತು 8,873.6 ಕೋಟಿ ರೂ.ಗಳನ್ನು ಕೇಂದ್ರ ಹಣಕಾಸು ಸಚಿವಾಲಯ ಶನಿವಾರ ಎಲ್ಲಾ ರಾಜ್ಯಗಳಿಗೆ ಬಿಡುಗಡೆ ಮಾಡಿದೆ" ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
"ಬಿಡುಗಡೆಯಾದ ಮೊತ್ತದ ಶೇ.50ರಷ್ಟನ್ನು ಅಂದರೆ 4436.8 ಕೋಟಿ ರೂ.ಗಳನ್ನು ರಾಜ್ಯಗಳು ಕೊರೊನಾ ನಿಗ್ರಹ ಕ್ರಮಗಳಿಗೆ ಬಳಕೆ ಮಾಡಿಕೊಳ್ಳಬಹುದು" ಎಂದು ಹಣಕಾಸು ಸಚಿವಾಲಯ ಹೇಳಿದೆ.
"8,873.6 ಕೋಟಿ ರೂ.ಗಳನ್ನು ಗೃಹ ವ್ಯವಹಾರಗಳ ಸಚಿವಾಲಯದ ಶಿಫಾರಸ್ಸಿನ ಮೇರೆಗೆ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ" ಎಂದು ಮಾಹಿತಿ ನೀಡಿದೆ.
"ಸಾಮಾನ್ಯವಾಗಿ, ಹಣಕಾಸು ಆಯೋಗದ ಶಿಫಾರಸ್ಸುಗಳ ಪ್ರಕಾರ, ಎಸ್ಡಿಆರ್ಎಫ್ನ ಮೊದಲ ಕಂತಿನ ಹಣ ಜೂನ್ ತಿಂಗಳಲ್ಲಿ ಬಿಡುಗಡೆ ಮಾಡುತ್ತದೆ. ಕಳೆದ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಒದಗಿಸಿದ ಮೊತ್ತದ ಬಳಕೆಯ ಪ್ರಮಾಣಪತ್ರಕ್ಕಾಗಿ ಕಾಯದೆ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ" ಎಂದು ತಿಳಿಸಿದೆ.
"ಆಸ್ಪತ್ರೆಗಳು, ವೆಂಟಿಲೇಟರ್ಗಳು, ಆಕ್ಸಿಜನ್ ಪೂರೈಕೆ, ಆಂಬ್ಯುಲೆನ್ಸ್ ಸೇವೆಗಳಿಗೆ, ಕೊರೊನಾ ಕೇಂದ್ರಗಳಿಗೆ, ಥರ್ಮಲ್ ಸ್ಕ್ಯಾನರ್ಗಳಿಗೆ, ಕೊರೊನಾ ನಿಯಂತ್ರಣಕ್ಕೆ, ಪ್ರಯೋಗಾಲಯಗಳಿಗೆ, ಟೆಸ್ಟಿಂಗ್ ಕಿಟ್ಗಳಿಗೆ ಸೇರಿದಂತೆ ವಿವಿಧ ಕ್ರಮಗಳಿಗೆ ಎಸ್ಡಿಆರ್ಎಫ್ನ ಹಣವನ್ನು ರಾಜ್ಯಗಳು ಬಳಸಿಕೊಳ್ಳಬಹುದು" ಎಂದು ತಿಳಿಸಿದೆ.