ಕಲಬುರ್ಗಿ, ಮೇ. 01 (DaijiworldNews/HR): "ಕೊರೊನಾ ತಪಾಸಣೆಗಾಗಿ ತಜ್ಞರ ತಂಡ ಸಿಟಿ ಸ್ಕ್ಯಾನ್ ಮಾಡಲು ಸಲಹೆ ನೀಡಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಅಧಿಕ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಇಂದು ನಿಗದಿತ ದರಗಳನ್ನು ಮಾತ್ರ ಪಡೆಯುವಂತೆ ಆದೇಶ ಹೊರಡಿಸಲಾಗುವುದು" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸ್ಕ್ಯಾನಿಂಗ್ ಮಾಡಲಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳೆ ಅಧಿಕ ಶುಲ್ಕ ಪಡೆಯುವಂತಿಲ್ಲ" ಎಂದರು
ಕರ್ನಾಟಕದಲ್ಲಿ 2 ಕೋಟಿ ಲಸಿಕೆಗಳನ್ನು ಪಡೆಯಲು ಉದ್ದೇಶಿಸಲಾಗಿದ್ದು, ಯಡಿಯೂರಪ್ಪ ಅವರು ಅಟಲ್ ಬಿಹಾರಿ ವಾಜಪೇಯಿ ಆಸ್ಪತ್ರೆಯಲ್ಲಿ ಲಸಿಕೆಗೆ ಚಾಲನೆ ನೀಡಲಿದ್ದಾರೆ. ಸಾರ್ವತ್ರಿಕ ಲಸಿಕೆ ಯಾವಾಗಿನಿಂದ ಆರಂಭವಾಗಲಿದೆ ಎಂಬುದು ಕಂಪನಿಗಳ ಉತ್ಪಾದನೆ ನೋಡಿಕೊಂಡು ತಿಳಿಸಲಾಗುತ್ತದೆ" ಎಂದಿದ್ದಾರೆ.
ಇನ್ನು ಸದ್ಯ ಆರು ಸಾವಿರ ಲಸಿಕಾ ಕೇಂದ್ರಗಳಿದ್ದು, ಅವುಗಳಿಗೆ 3 ಲಕ್ಷ ಲಸಿಕೆ ಅಗತ್ಯವಿದೆ. ಆದರೆ ಸಾರ್ವತ್ರಿಕ ಲಸಿಕೆ ಆರಂಭವಾದಾಗ ಪ್ರತಿದಿನ ಆರು ಲಕ್ಷ ಲಸಿಕೆಯಾದರೂ ಬೇಕಾಗುತ್ತದೆ" ಎಂದು ಹೇಳಿದ್ದಾರೆ.
ಎಲ್ಲ ಕೊರೊನಾ ರೋಗಿಗಳಿಗೂ ರೆಮ್ ಡಿಸಿವಿರ್ ಇಂಜೆಕ್ಷನ್ ಅಗತ್ಯವಿಲ್ಲ, ಸ್ವಯಂ ನಿರ್ಧಾರ ಮಾಡಿ ಯಾರೂ ತೆಗೆದುಕೊಳ್ಳಬಾರದು. ಯಾವ ರೋಗಿಗಳಿಗೆ ನೀಡಬೇಕು ಎಂಬ ಬಗ್ಗೆ ವೈದ್ಯರಿಗೆ ತಾಂತ್ರಿಕ ಸಮಿತಿ ಸಲಹೆ ನೀಡಲಿದೆ" ಎಂದಿದ್ದಾರೆ.