ಲಕ್ನೋ, ಮೇ.01 (DaijiworldNews/PY): ತಾಯಿ ಮರಣಹೊಂದಿ 2 ದಿನ ಕಳೆದರೂ ಆಕೆಯ ಪುಟ್ಟ ಕಂದಮ್ಮ ಶವದೊಂದಿಗೆ ಕಾಲಕಳೆದಿರುವ ಘಟನೆ ಲಕ್ನೋದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತ ಮಹಿಳೆಯನ್ನು ಸರಸ್ವತಿ ರಾಜೇಶ್ ಕುಮಾರ್ (29) ಎಂದು ಗುರುತಿಸಲಾಗಿದೆ.
ಪಿಂಪ್ರಿ ಚಿಚ್ಚಾಡದ ಬಾಡಿಗೆ ಮನೆಯಲ್ಲಿ ಸರಸ್ವತಿ ಅವರು ಸಾವನ್ನಪ್ಪಿದ್ದು, ಈ ವೇಳೆ ಅವರ ಪುಟ್ಟ ಕಂದಮ್ಮ ಮೃತದೇಹದ ಬಳಿ ಹಸಿವಿನಿಂದ ನರಳುತ್ತಿರುವುದು ಕಂಡುಬಂದಿದೆ.
ಸರಸ್ವತಿ ಅವರು ಸಾವನ್ನಪ್ಪಿರುವ ವಿಚಾರ ಅವರ ಬಂಧುಗಳಿಗೂ ತಿಳಿದಿದ್ದರೂ ಕೂಡಾ ಕೊರೊನಾ ಭಯದಿಂದ ಯಾರೂ ಕೂಡಾ ಮೃತದೇಹದ ಬಳಿ ಹೋಗಿಲ್ಲ. ಕೊನೆಗೆ ಮನೆಯ ಮಾಲೀಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದ ಸಂದರ್ಭ ಮೃತದೇಹದ ಬಳಿ ಪುಟ್ಟ ಕಂದಮ್ಮ ಹಸಿವಿನಿಂದ ನರಳುತ್ತಿರುವುದನ್ನು ನೋಡಿದ್ದಾರೆ.
ಕೊನೆಗೆ ಪೊಲೀಸ್ ಪೇದೆ ಸುಶೀಲಾ ಹಾಗೂ ರೇಖಾ ಮಗುವನ್ನು ಎತ್ತಿಕೊಂಡು ಆಹಾರ ನೀಡಿದ್ದಾರೆ. ಮಗು ಆರೋಗ್ಯವಿದ್ದು, ಮಗುವಿನ ಕೊರೊನಾ ವರದಿಯಲ್ಲಿ ನೆಗೆಟಿವ್ ಬಂದಿದೆ. ಸರಸ್ವತಿ ಅವರ ಸಾವಿಗೆ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ. ಘಟನೆ ನಡೆದ ಸಂದರ್ಭ ಸರಸ್ವತಿ ಅವರ ಪತಿ ಉತ್ತರಪ್ರದೇಶಕ್ಕೆ ಹೋಗಿದ್ದರು ಎನ್ನಲಾಗಿದೆ.