ಬೆಂಗಳೂರು, ಮೇ 01 (DaijiworldNews/MB) : ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಅತ್ಯಾಚಾರ ಮೊದಲಾದ ತೊಂದರೆ ಅನುಭವಿಸುತ್ತಿರುವ ಮಹಿಳೆಯರಿಗೆ ಸಾಂತ್ವನ ನೀಡಲು ರಾಜ್ಯದಲ್ಲಿ 2001 ರಲ್ಲಿ ಆರಂಭವಾಗಿದ್ದ ಸಾಂತ್ವನ ಕೇಂದ್ರವನ್ನು ರಾಜ್ಯ ಸರ್ಕಾರ ಮುಚ್ಚಿರುವುದರ ವಿರುದ್ದ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕಳೆದ ಮೇ ತಿಂಗಳಿನಿಂದ ಕೇಂದ್ರ ಸರ್ಕಾರದ ಸಖಿ - ಒನ್ ಸ್ಟಾಪ್ ಸೆಂಟರ್ಗಳು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಸಾಂತ್ವನ ಯೋಜನೆಯನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ತಿಳಿಸಿತ್ತು. ಆದರೆ ಆಗಸ್ಟ್ನಲ್ಲಿ ಸರ್ಕಾರ ಸಭೆ ನಡೆಸಿ ಯಾವುದೇ ಬೇರೆ ಮಹಿಳಾ ಸಂಬಂಧಿ ಕೇಂದ್ರಗಳು ಇಲ್ಲದ 123 ತಾಲ್ಲೂಕುಗಳಲ್ಲಿ ಸಾಂತ್ವನ ಕೇಂದ್ರ ಮುಂದುವರಿಸಲು ಚರ್ಚಿಸಲಾಗಿತ್ತು. ಆದರೆ ಈಗ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಇರುವ ಸಾಂತ್ವನ ಕೇಂದ್ರಗಳು, ಸ್ವೀಕಾರ ಕೇಂದ್ರ, ರಾಜ್ಯ ಮಹಿಳಾ ನಿಲಯ, ಉಜ್ವಲ, ತಾಲ್ಲೂಕು ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ.
ಈ ಬಗ್ಗೆ ರಾಜ್ಯ ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಹೆಚ್ಡಿಕೆ, ''ಮಹಿಳೆಯರಿಗೆ ಆಸರೆಯಾಗಿದ್ದ ಸಾಂತ್ವನ ಕೇಂದ್ರಗಳಿಗೆ ಸರ್ಕಾರ ಬೀಗ ಜಡಿಯಲ್ಲ ಎಂದಿದ್ದ ಮುಖ್ಯಮಂತ್ರಿಗಳು ಸದ್ದಿಲ್ಲದಂತೆ ಎಲ್ಲಾ ಜಿಲ್ಲಾ ಮತ್ತು ಕೆಲವು ತಾಲ್ಲೂಕು ಮಟ್ಟದ 71 ಕೇಂದ್ರಗಳ ಸಾಂತ್ವನ ಕೇಂದ್ರಗಳಿಗೆ ಬೀಗ ಜಡಿಸಿ ಮಾತು ತಪ್ಪಿದ್ದಾರೆ'' ಎಂದು ಕಿಡಿಕಾರಿದ್ದಾರೆ.
''ಕೋವಿಡ್ 19 ಸಂಕಷ್ಟದಲ್ಲಿ ಸ್ತ್ರೀಯರಿಗೆ ಮತ್ತೊಂದು ಬರೆ ಎಳೆದಂತಾಗಿದೆ. ಕೌಟುಂಬಿಕ ಹಿಂಸಾಚಾರ ನಿಯಂತ್ರಿಸಿ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸುವ ವಿಶ್ವಸಂಸ್ಥೆಯ ಆಶಯ ಬದಿಗೊತ್ತಿರುವುದು ಖಂಡನೀಯ'' ಎಂದಿದ್ದಾರೆ.
''ಕಳೆದ ಎರಡು ದಶಕಗಳಿಂದ ಸಾಂತ್ವನ ಯೋಜನೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿನ ಸಾಂತ್ವನ ಕೇಂದ್ರಗಳು ಮಹಿಳೆಯರ ಸಮಸ್ಯೆಗಳಿಗೆ ಧ್ವನಿಯಾಗಿ, ಆತ್ಮವಿಶ್ವಾಸ ಮೂಡಿಸುತ್ತಿವೆ'' ಎಂದು ಹೇಳಿದ್ದಾರೆ.
''ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಆರಂಭಗೊಂಡಿದ್ದ ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಿ ಅದೇಶ ಹೊರಡಿಸಿರುವುದು ದೂರು ದುಮ್ಮಾನ ಪರಿಹರಿಸುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ'' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
''ಸರ್ಕಾರದ ಸಖಿ ಒನ್ ಸ್ಟಾಪ್ ಸೆಂಟರ್ ಯೋಜನೆ ಲೈಂಗಿಕ ಮತ್ತು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು, ಸಲಹೆ ನೀಡುವ ಉದ್ದೇಶವನ್ನು ಹೊಂದಿದ್ದರೂ ಕರ್ನಾಟಕದಲ್ಲಿ ಅದು ಪೂರ್ಣ ಪ್ರಮಾಣದಲ್ಲಿ ಕಾರ್ಯ ಮಾಡುತ್ತಿಲ್ಲ. ಜಿಲ್ಲೆಗೆ ಕೇವಲ ಒಂದೇ ಒಂದು ಕೇಂದ್ರ ಇರುವ ಕಾರಣ ಎಲ್ಲರಿಗೂ ಸುಲಭವಾಗಿ ನೆರವು ಸಿಗಲು ಸಾಧ್ಯವಾಗುತ್ತಿಲ್ಲ'' ಎಂದು ತಿಳಿಸಿದ್ದಾರೆ.
''ಇನ್ನು ಕೌಟುಂಬಿಕ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರ ಕಷ್ಟವನ್ನು ದೇವರೇ ಕಾಪಡಬೇಕಿದೆ. ಈ ಸಮಯದಲ್ಲಿ ಸಾಂತ್ವನ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುದು ಸೂಕ್ತವಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರೇ ಈ ಕೂಡಲೇ ಅದೇಶ ಹಿಂಪಡೆದು ಸಾಂತ್ವನ ಕೇಂದ್ರಗಳನ್ನು ಮುಂದುವರೆಸಿ. ಶೋಷಿತ ಮಹಿಳೆಯರಿಗೆ ಸಾಂತ್ವನ ಕೇಂದ್ರಗಳು ಆಸರೆಯಾಗಲಿ'' ಎಂದು ಹೇಳಿದ್ದಾರೆ.