ಬೆಂಗಳೂರು, ಎ.30 (DaijiworldNews/PY): "ಮಾತಲ್ಲಿ ಲಸಿಕೆ ಅಭಿಯಾನ, ವಾಸ್ತವದಲ್ಲಿ ಲಸಿಕೆ ಇಲ್ಲದೆ ಅಧ್ವಾನ. ಸಚಿವ ಸುಧಾಕರ್ ಅವರೇ ಪ್ರಾಮಾಣಿಕವಾಗಿ ಕೆಲಸ ಮಾಡಿ, ಇಲ್ಲವೇ ರಾಜೀನಾಮೆ ನೀಡಿ" ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಕರೋನಾ ಸೋಂಕು ಬಂದು 1 ವರ್ಷವಾಗಿದೆ. ತಜ್ಞರ ಎಚ್ಚರಿಕೆಯ ವರದಿ ಬಂದು 6 ತಿಂಗಳಾಗಿದೆ. ವೈದ್ಯಕೀಯ ಅವ್ಯವಸ್ಥೆ, ಕೊರತೆಯ ದೂರು ಕೇಳಿ ಬರುತ್ತಾ 1 ತಿಂಗಳಾಗಿದೆ. ಇಂದಿಗೂ ರೆಮಿಡಿಸಿವಿರ್, ಆಕ್ಸಿಜನ್, ಬೆಡ್, ಆಂಬ್ಯುಲೆನ್ಸ್ಗಳ ಕೊರತೆ ನೀಗಿಸಲಿಲ್ಲ ಸರ್ಕಾರ. ಸಚಿವ ಸುಧಾಕರ್ ಅವರೇ ಪ್ರಾಮಾಣಿಕವಾಗಿ ಕೆಲಸ ಮಾಡಿ, ಇಲ್ಲವೇ ರಾಜೀನಾಮೆ ನೀಡಿ" ಎಂದು ಒತ್ತಾಯಿಸಿದೆ.
"ಲಸಿಕೆ ಸಾಕಷ್ಟು ಇದೆ, ಆಕ್ಸಿಜನ್ ಬೇಕಾದಷ್ಟಿದೆ, ಬೆಡ್ಗಳು ಸರಾಗವಾಗಿ ಸಿಗುತ್ತಿದೆ. ರೆಮಿಡಿಸಿವಿರ್ ಸಾಕಷ್ಟಿದೆ, ರಾಜ್ಯದಲ್ಲಿ ಸೋಂಕಿತರು ಸಾಯುತ್ತಲೇ ಇಲ್ಲ, ಯಾವುದೇ ವೈದ್ಯಕೀಯ ಸಮಸ್ಯೆಗಳೇ ಇಲ್ಲ. ಇದೆಲ್ಲವೂ ಫೇಕ್ ಫ್ಯಾಕ್ಟರಿ ಖ್ಯಾತಿಯ ಬಿಜೆಪಿ ಟ್ವೀಟ್ಗಳಲ್ಲಿ ಮಾತ್ರ. ಜನ ಸಾಯುತ್ತಿದ್ದಾರೆ, ಇವರ ಸುಳ್ಳು ಮುಂದುವರೆಯುತ್ತಲೇ ಇದೆ" ಎಂದಿದೆ.
"ಮಾತಲ್ಲಿ ಲಸಿಕೆ ಅಭಿಯಾನ, ವಾಸ್ತವದಲ್ಲಿ ಲಸಿಕೆ ಇಲ್ಲದೆ ಅಧ್ವಾನ. ಲಸಿಕೆ ಯಾವಾಗ ಬರಲಿದೆ - ಗೊತ್ತಿಲ್ಲ, ಲಸಿಕೆ ಎಷ್ಟು ಬೇಕಾಗಲಿದೆ - ಗೊತ್ತಿಲ್ಲ, ಕಂಪೆನಿಗಳು ನೀಡುವ ಭರವಸೆ ಇದೆಯೇ - ಗೊತ್ತಿಲ್ಲ, ಕೇಂದ್ರ ಲಸಿಕೆ ನೀಡಲಿದೆಯೇ - ಗೊತ್ತಿಲ್ಲ, ಎಂದಿನಿಂದ ಲಸಿಕೆ ನೀಡಬಹುದು - ಗೊತ್ತಿಲ್ಲ, ಲಸಿಕೆ ದಾಸ್ತಾನು ಎಷ್ಟಿದೆ - ಗೊತ್ತಿಲ್ಲ ನಮ್ಮಲ್ಲಿರುವುದು ಇದ್ಯಾವುದೂ ಗೊತ್ತಿಲ್ಲದ ಮೂರ್ಖ ಮಂತ್ರಿ ಸಚಿವ ಸುಧಾಕರ್" ಎಂದು ಆರೋಪಿಸಿದೆ.
"ಸೋಂಕಿತರ ಸಾವಿನ ಪ್ರಮಾಣ ಹೆಚ್ಚುತ್ತಿದೆ ಎಂದರೆ ಅದು ಸೋಂಕಿನ ಪ್ರಭಾವವಲ್ಲ, ಸರ್ಕಾರದ ವೈಫಲ್ಯ. ಸುದ್ದಿಗಳೆಲ್ಲವೂ, ಆಕ್ಸಿಜನ್ ಇಲ್ಲದೆ ಸಾವು, ಹಾಸಿಗೆ ಸಿಗದೆ ಸಾವು, ವೆಂಟಿಲೇಟರ್ ಸಿಗದೆ ಸಾವು, ಚಿಕಿತ್ಸೆ ಸಿಗದೆ ಸಾವು, ತಜ್ಞರ ಪ್ರಕಾರ ಸೋಂಕಿತರನ್ನು 98% ಕಾಪಾಡುವ ಸಾಧ್ಯತೆ ಇದೆ. ಆದರೆ ಬೇಜವಾಬ್ದಾರಿ ಕೊಲೆಗಡುಕ ಸರ್ಕಾರದಿಂದ ಸಾವು ಹೆಚ್ಚಿದೆ" ಎಂದು ಕಿಡಿಕಾರಿದೆ.
"ಸಚಿವ ಸುಧಾಕರ್ ಅವರೇ, ಲಸಿಕೆ ಹಂಚಿಕೆ ಯಾವ ದಿನಾಂಕದಿಂದ ನೀಡುವಿರಿ? ಲಸಿಕೆ ಕೊರತೆಯನ್ನು ನಿಭಾಯಿಸಲು ಯಾವ ಯೋಜನೆ ಹೊಂದಿದ್ದೀರಿ? ಕೇಂದ್ರ ಸರ್ಕಾರಕ್ಕೆ ಲಸಿಕೆ ನೀಡುವಂತೆ ಏಕೆ ಬೇಡಿಕೆ ಇಟ್ಟಿಲ್ಲ? ರಾಜ್ಯದಲ್ಲಿ ಸರ್ವರಿಗೂ ಲಸಿಕೆ ನೀಡಲು ನಿಮಗೆ ಎಷ್ಟು ಕಾಲಾವಧಿ ಬೇಕು? ಲಸಿಕೆ ನೀಡಿಕೆಯ ಬಗ್ಗೆ ಸರ್ಕಾರದ ಕಾರ್ಯತಂತ್ರವೇನು?" ಎಂದು ಪ್ರಶ್ನಿಸಿದೆ.