ನವದೆಹಲಿ, ಏ.30 (DaijiworldNews/HR): ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಲಸಿಕೆಗಳನ್ನು ಪಡೆಯುವುದಕ್ಕೆ ಬಡವರಿಗೆ ಹಣ ನೀಡಲು ಸಾಧ್ಯವಾಗುವುದಿಲ್ಲವಾದ್ದರಿಂದ ರಾಷ್ಟ್ರೀಯ ರೋಗನಿರೋಧಕ ಮಾದರಿಯನ್ನು ಕೊರೊನಾ ಲಸಿಕೆ ಅಭಿಯಾನಕ್ಕೆ ಅಳವಡಿಸಿಕೊಳ್ಳಬೇಕು" ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಯಾವ ರಾಜ್ಯಗಳಿಗೆ ಎಷ್ಟು ಕೊರೊನಾ ಲಸಿಕೆಗಳನ್ನು ನೀಡಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲು ಖಾಸಗಿ ಲಸಿಕೆ ಉತ್ಪಾದಕರು ಅವಕಾಶ ಕೊಡಬಾರದು, ದೇಶದಲ್ಲಿ ಆರೋಗ್ಯ ವಲಯ ಮಹತ್ವದ ಘಟಕ್ಕೆ ಬಂದಿದ್ದು ನಿವೃತ್ತ ವೈದ್ಯರು ಅಥವಾ ಅಧಿಕಾರಿಗಳನ್ನು ಸೇವೆಗೆ ಮರು ನೇಮಕ ಮಾಡಿಕೊಳ್ಳಬೇಕು" ಎಂದಿದೆ.
ಬೆಡ್ಗಳ ಕೊರತೆ ಉಂಟಾಗಿರುವ ಸಂದರ್ಭದಲ್ಲಿ ಆರೋಗ್ಯ ಸೇವೆ ಕಾರ್ಯಕರ್ತರು, ವೈದ್ಯರಿಗೆ ಕೂಡ ಸರಿಯಾಗಿ ಬೆಡ್ ಸಿಗುತ್ತಿಲ್ಲ, ಪರಿಸ್ಥಿತಿ ಚಿಂತಾಜನಕವಾಗಿದ್ದು, ಹಾಸ್ಟೆಲ್, ದೇವಸ್ಥಾನ, ಮಂದಿರ, ಚರ್ಚ್ ಸೇರಿದಂತೆ ಇತರ ಸಾರ್ವಜನಿಕ ಸ್ಥಳಗಳನ್ನು ಕೊರೊನಾ ಕೇಂದ್ರಗಳನ್ನಾಗಿ ಪರಿವರ್ತಿಸಿ ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.
ಇನ್ನು ಇಂಟರ್ನೆಟ್, ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಬಗ್ಗೆ ನಾಗರಿಕರು ಎತ್ತಿರುವ ಪ್ರಶ್ನೆಗಳು, ಸಂದೇಹಗಳು ತಪ್ಪು ಎಂದು ಭಾವಿಸಲು ಸಾಧ್ಯವಾಗುವುದಿಲ್ಲ,ದೇಶದ ಜನರ ಕಷ್ಟ, ಸಂಶಯ, ಗೊಂದಲಗಳ ಬಗ್ಗೆ ಆಲಿಸಿ ಅವರಿಗೆ ಸೂಕ್ತ ಮಾಹಿತಿ, ತಿಳುವಳಿಕೆ ನೀಡಬೇಕು, ಮಾಹಿತಿ ಜನತೆಗೆ ತಲುಪಬೇಕು, ಆರೋಗ್ಯ ಸೌಲಭ್ಯ, ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಮಾಹಿತಿಗಳು ಜನತೆಗೆ ತಲುಪಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಹೇಳಿದೆ.
ಕೊರೊನಾಗೆ ಸಂಬಂಧಿಸಿದ ಮಾಹಿತಿಗಳನ್ನು ಜನರಿಗೆ ತಲುಪದಂತೆ ತಡೆಯುವುದು, ತಿರಸ್ಕರಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಗಳನ್ನು ಮತ್ತು ವಾಸ್ತವ ಪರಿಸ್ಥಿತಿಗಳನ್ನು ಹತ್ತಿಕ್ಕಲು ನೋಡಿದರೆ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಡಿಜಿಪಿಗಳಿಗೆ ಆದೇಶ ಹೊರಡಿಸಬೇಕೆಂದು ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.
ಇನ್ನು ಕೊರೊನಾ ಲಸಿಕೆಗಳ ಬೆಲೆಯ ಬಗ್ಗೆ ನ್ಯಾಯಾಲಯವು ಕೇಂದ್ರವನ್ನು ಪ್ರಶ್ನಿಸಿದ್ದು, ಈ ಸಮಯದಲ್ಲಿ ಫಾರ್ಮ ಕಂಪೆನಿಗಳಿಂದ ಶೇಕಡಾ 100ರಷ್ಟು ಲಸಿಕೆಗಳನ್ನು ಏಕೆ ಸರ್ಕಾರ ಖರೀದಿಸುತ್ತಿಲ್ಲ, ಕೇಂದ್ರ ಮತ್ತು ರಾಜ್ಯಗಳಿಗೆ ಬೇರೆ ಬೇರೆ ಬೆಲೆಗಳು ಏಕೆ, ದೇಶಾದ್ಯಂತ ಲಸಿಕೆಗಳಿಗೆ ಏಕರೂಪ ಬೆಲೆ ತರಬಹುದಲ್ಲವೇ? ಎಂದು ಪ್ರಶ್ನಿಸಿದೆ.