ನವದೆಹಲಿ, ಏ 30(DaijiworldNews/MS): ಹಿಂದಿ ನ್ಯೂಸ್ ಚಾನೆಲ್ ನ ಹೆಸರಾತ ಸುದ್ದಿವಾಚಕ , ಖ್ಯಾತ ಪತ್ರಕರ್ತರಾಗಿದ್ದ ರೋಹಿತ್ ಸರ್ದಾನ ಅವರು ಕೊರೊನಾ ಸೋಂಕಿತರಾಗಿದ್ದು , ಶುಕ್ರವಾರ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಏಪ್ರಿಲ್ 24ರಂದು ರೋಹಿತ್ ಸರ್ದಾನ ಅವರಿಗೆ ಕೊರೊನಾ ಸೋಂಕು ತಗಲಿತ್ತು. ಈ ಬಗ್ಗೆ ಸರ್ದಾನ ಅವರೇ ಟ್ವೀಟ್ ಮಾಡಿದ್ದರು. ಒಂದು ವಾರದ ಹಿಂದೆ ಜ್ವರ ಮತ್ತು ಇತರ ಲಕ್ಷಣ ಕಾಣಿಸಿಕೊಂಡಾಗ ಪರೀಕ್ಷೆ ನಡೆಸಿದೆ. ಆರ್.ಟಿ.ಪಿ.ಸಿ.ಆರ್ ವರದಿಯಲ್ಲಿ ನೆಗೆಟಿವ್ ಬಂತು. ಸಿಟಿ ಸ್ಕ್ಯಾನ್ ಮಾಡಿಸಿದಾಗ ಕೊವಿಡ್ ಇರುವುದು ದೃಢಪಟ್ಟಿದೆ. ಈಗ ಆರೋಗ್ಯ ಕೊಂಚ ಸುಧಾರಿಸಿದೆ. ನೀವು ಕೂಡಾ ನಿಮ್ಮ ಮತ್ತು ನಿಮ್ಮ ಕುಟುಂಬದ ಕಾಳಜಿ ವಹಿಸಿ ಎಂದಿದ್ದರು
ಮಾದ್ಯಮದೊಂದಿಗೆ ಸುದೀರ್ಘ ಮತ್ತು ಅತ್ಯಂತ ಯಶಸ್ವಿ ಒಡನಾಟವನ್ನು ಹೊಂದಿದ್ದ ರೋಹಿತ್ ಸರ್ದಾನಾ ಅವರ ಅಕಾಲಿಕ ಮತ್ತು ಆಘಾತಕಾರಿ ನಿಧನವು ಮಾಧ್ಯಮ ಜಗತ್ತನ್ನು ತೀವ್ರ ಆಘಾತದ ಸ್ಥಿತಿಗೆ ತಂದಿದೆ.
ರೋಹಿತ್ ಮರಣದ ಸುದ್ದಿಯನ್ನು ಜೀ ನ್ಯೂಸ್ನ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಟ್ವೀಟ್ ಮಾಡಿದ್ದು, " ಸ್ವಲ್ಪ ಹೊತ್ತಿನ ಹಿಂದೆ ಇವಾನ್ ಕರೆ ಮಾಡಿ ವಿಷಯವೊಂದನ್ನು ಹೇಳಿದಾಗ ನನ್ನ ಕೈಕಾಲು ಕಂಪಿಸಿತು. ನನ್ನ ಗೆಳೆಯ ಹಾಗು ಸಹೋದ್ಯೋಗಿ ರೋಹಿತ್ ಸರ್ದಾನ ಅವರ ನಿಧನ ಸುದ್ದಿಯಾಗಿತ್ತು ಅದು . ನಮ್ಮ ಆಪ್ತರೊಬ್ಬರು ವೈರಸ್ಗೆ ಬಲಿಯಾಗುತ್ತಾರೆ ಎಂದು ಊಹಿಸಿರಲಿಲ್ಲ. ಈ ಸುದ್ದಿಯನ್ನು ಸ್ವೀಕರಿಸಲು ನಾನು ಸಿದ್ಧನಿರಲಿಲ್ಲ. ಭಗವಂತ ಮೋಸ ಮಾಡಿಬಿಟ್ಟ ಎಂದು ಬರೆದುಕೊಂಡಿದ್ದಾರೆ.