ವಿಜಯಪುರ, ಎ.30 (DaijiworldNews/PY): ರೆಮ್ಡಿಸಿವರ್ ಲಸಿಕೆಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದ ಐವರನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಧಿತ ಆರೋಪಿಗಳನ್ನು ಆದಿತ್ಯ ಅಣ್ಣಾರಾಯ ಜೋಶಿ, ಆನಂದ ಸೋಹನ್ ರುಣವಾಲ್, ಶೃತಿ ಹಡಪದ, ವಿಜಯ ಪ್ರಭಾಕರ ದೇಶಪಾಂಡೆ ಹಾಗೂ ಮಹ್ಮದ್ ಅಬ್ದುಲ್ ಆಲಂ ಮುಲ್ಲಾ ಎಂದು ಗುರುತಿಸಲಾಗಿದೆ.
ತನ್ನಲ್ಲಿ ರೆಮ್ಡಿಸಿವರ್ ಲಸಿಕೆ ಹೆಚ್ಚಿನ ಬೆಲೆಗೆ ಮಾರಾಟಕ್ಕೆ ಲಭ್ಯ ಎಂದು ಶೃತಿ ಮಹೇಶ ಹಡಪದ ಎಂಬಾಕೆ ಕಾಳಸಂತೆ ದಂಧೆಯಲ್ಲಿ ತೊಡಗಿದ್ದ ಸಂದರ್ಭ ಔಷಧಿ ನಿಯಂತ್ರಣ ಇಲಾಖೆಯ ನೀಲಕಂಠ ತಾರು ರಾಠೋಡ ಎಂಬವರು ದೂರು ನೀಡಿದ್ದರು.
ಈ ದೂರನ್ನು ಅಧರಿಸಿದ ಗೋಲಗುಂಬಜ ಠಾಣೆಯ ಸಿಪಿಐ ಬಸವರಾಜ ಮೂಕರ್ತಿಹಾಳ, ಎಸೈ ಆರ್.ಎಸ್. ಲಮಾಣಿ ನೇತೃತ್ವದಲ್ಲಿ ರೆಮ್ಡಿಸಿವರ್ ಅಕ್ರಮ ಜಾಲದಲ್ಲಿದ್ದ ಐವರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.