ಬೆಂಗಳೂರು, ಏ 30(DaijiworldNews/MS): ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನವನ್ನು ರಾಜ್ಯದಲ್ಲಿ ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ, ಹೀಗಾಗಿ ಯುವಕರು ಲಸಿಕೆ ಪಡೆದುಕೊಳ್ಳಲೆಂದು ನಾಳೆ ಆಸ್ಪತ್ರೆಗೆ ಅಥವಾ ಲಸಿಕೆ ಕೇಂದ್ರಗಳಿಗೆ ಹೋಗಬೇಡಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಈ ಹಿಂದೆ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಘೋಷಿಸಿತ್ತು. ಅದರಂತೆ ಹಲವು ಜನರು ಲಸಿಕೆಗಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಆದರೆ ಶುಕ್ರವಾರ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈಗಾಗಲೇ ಸರ್ಕಾರ 400 ಕೋಟಿ ರೂಪಾಯಿಗಳನ್ನು ಲಸಿಕೆ ತಯಾರಿಕಾ ಕಂಪೆನಿ ಸೆರಂ ಇನ್ಸ್ಟಿಟ್ಯೂಟ್ ಗೆ ನೀಡಿ 1 ಕೋಟಿ ಡೋಸ್ ಗೆ ಆರ್ಡರ್ ನೀಡಿದ್ದೇವೆ. ಭಾರತ್ ಬಯೋಟೆಕ್ ಕಂಪೆನಿ, ರಷ್ಯಾ ಮೂಲದ ಕಂಪೆನಿಗೆ ಸಹ ಆರ್ಡರ್ ನೀಡಿದ್ದು ಈ ಕಂಪನಿಗಳು ಯಾವಾಗ ಲಸಿಕೆ ಕಳುಹಿಸಿಕೊಡುತ್ತವೆ ಎಂದು ಇನ್ನು ಸರ್ಕಾರಕ್ಕೆ ಅಧಿಕೃತವಾಗಿ ಹೇಳಿಲ್ಲ. ರಾಜ್ಯಕ್ಕೆ ಬೇಕಾದಷ್ಟು ಲಸಿಕೆ ತಲುಪಿಲ್ಲ. ಯಾವಾಗ ಲಸಿಕೆ ಬರುತ್ತಿದೆ ಎಂಬ ಬಗ್ಗೆಯೂ ಸ್ಪಷ್ಟ ಮಾಹಿತಿಯೂ ಇಲ್ಲ, ಹೀಗಾಗಿ ನಾಳೆ ಆಸ್ಪತ್ರೆಗೆ ಬರಬೇಡಿ ಎಂದು ಸಚಿವರು ವಿನಂತಿಸಿದರು.
ಎಲ್ಲರಿಗೂ ಲಸಿಕೆ ನೀಡಲು ಆರಂಭಿಸಿದರೆ ಪ್ರತಿ ದಿನ 4-5 ಲಕ್ಷ ಡೋಸ್ ಲಸಿಕೆ ಬೇಕಾಗುತ್ತದೆ. ಹೀಗಾಗಿ, ಕನಿಷ್ಠ 30 ಲಕ್ಷ ದಾಸ್ತಾನು ಇದ್ದರೆ ಮಾತ್ರವೇ ಸುಗಮವಾಗಿ ಲಸಿಕೆ ಅಭಿಯಾನ ನಡೆಯಲು ಸಾಧ್ಯ. ಲಸಿಕೆ ಅಭಿಯಾನ ಆರಂಭವಾಗುವ ದಿನವನ್ನು ಮುಂದಿನ ದಿನಗಳಲ್ಲಿ ಸರ್ಕಾರವೇ ರಾಜ್ಯದ ಜನತೆಗೆ ತಿಳಿಸುತ್ತೇವೆ. ಕೋವಿಡ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿಸಬಹುದು ಎಂದು ಡಾ ಸುಧಾಕರ್ ಹೇಳಿದ್ದಾರೆ.