ಮೈಸೂರು, ಎ.30 (DaijiworldNews/PY): ಪತ್ನಿಯ ಶೀಲ ಶಂಕಿಸಿ ವಿಶೇಷಚೇತನನೋರ್ವ ಕುಡಿದ ಮತ್ತಿನಲ್ಲಿ ತುಂಬು ಗರ್ಭಿಣಿ ಪತ್ನಿ ಸೇರಿದಂತೆ ತಾಯಿ ಹಾಗೂ ಇಬ್ಬರು ಮಕ್ಕಳನ್ನು ಕಬ್ಬಿಣದ ರಾಡ್ನಿಂದ ಹೊಡೆದು ಹತ್ಯೆಗೈದ ಘಟನೆ ಸರಗೂರು ತಾಲೂಕಿನ ಚಾಮೇಗೌಡನಹುಂಡಿ ಗ್ರಾಮದಲ್ಲಿ ನಡೆದಿದೆ.
ಆರೋಪಿಯನ್ನು ಮಣಿಕಂಠ ಸ್ವಾಮಿ (35) ಎಂದು ಗುರುತಿಸಲಾಗಿದೆ.
ಮಣಿಕಂಠ ಸ್ವಾಮಿ, ತನ್ನ ಪತ್ನಿಯ ಶೀಲ ಶಂಕಿಸಿ ಮನೆಗೆ ಬಂದು ಜಗಳವಾಡುತ್ತಿದ್ದ ಎನ್ನಲಾಗಿದೆ. ಈ ವಿಚಾರದ ಬಗ್ಗೆ ತಡರಾತ್ರಿಯೂ ಮಾತುಕತೆ ನಡೆದಿದ್ದು, ಕುಡಿದ ಅಮಲಿನಲ್ಲಿದ್ದ ಮಣಿಕಂಠ ಸ್ವಾಮಿ ಪತ್ನಿ ಗಂಗಾ (28), ತಾಯಿ ಕೆಂಪಾಲಮ್ಮ (60), ಮಕ್ಕಳಾದ ಸಾಮ್ರಾಟ್ (3), ರೋಹಿತ್ (2) ಅವರ ತಲೆಗೆ ರಾಡ್ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ನಾಲ್ವರನ್ನು ಹತ್ಯೆಗೈದ ಬಳಿಕ ಮಣಿಕಂಠ ಸ್ವಾಮಿ ತನ್ನ ವಾಹನದಲ್ಲಿ ಪರಾರಿಯಾಗಿದ್ದಾನೆ.
ಮಣಿಕಂಠ ಸ್ವಾಮಿಯ ಪತ್ನಿ ತುಂಬು ಗರ್ಭಿಣಿಯಾಗಿದ್ದು, ಒಂದೆರಡು ದಿನಗಳಲ್ಲಿ ಹೆರಿಗೆಯಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ. ಹೆಗ್ಗನೂರಿನವರಾಗಿದ್ದ ಗಂಗಾ ಅವರು ಕಳೆದ 7 ವರ್ಷಗಳ ಹಿಂದೆ ಮಣಿಕಂಠ ಸ್ವಾಮಿಯನ್ನು ವಿವಾಹವಾಗಿದ್ದರು. ಮೂರನೇ ಹೆರಿಗೆಗಾಗಿ ಮಗಳನ್ನು ಮನೆಗೆ ಕರೆದುಕೊಂಡು ಹೋಗಲು ಗಂಗಾಳ ಪೋಷಕರು ಮನೆಗೆ ಬಂದಿದ್ದರು. ಆದರೆ, ಮಣಿಕಂಠ ಸ್ವಾಮಿ ತಾನೇ ಪತ್ನಿಯ ಬಾಣಂತನ ಮಾಡುತ್ತೇನೆ ಎಂದು ತಿಳಿಸಿದ್ದು, ಇದರಿಂದ ಇಬ್ಬರ ನಡುವೆಯೂ ಜಗಳ ನಡೆದಿತ್ತು.
ದಕ್ಷಿಣ ವಲಯ ಪೋಲೀಸ್ ಮಹಾ ನಿರೀಕ್ಷಕ ಪ್ರವೀಣ್ ಮಧುಕರ್ ಪವರ್, ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಹುಣಸೂರು ವಿಭಾಗದ ಡಿವೈಎಸ್ಪಿ ರವಿಪ್ರಸಾದ್, ವೃತ್ತ ನಿರೀಕ್ಷಕ ಎನ್.ಆನಂದ್, ರಾಜೇಂದ್ರ, ಪಿಎಸ್ಐಗಳಾದ ಜಯಪ್ರಕಾಶ್, ಆರ್.ದಿವ್ಯ, ಶ್ವಾನದಳ, ಬೆರಳಚ್ಚು ತಜ್ಞರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಘಟನೆಯ ಬಗ್ಗೆ ಮೃತ ಗಂಗಾಳ ಸಹೋದರ ಲೋಕೇಶ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.