ಬೆಂಗಳೂರು, ಎ.29 (DaijiworldNews/PY): ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಮೇ.1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಲಸಿಕೆ ಕಡ್ಡಾಯಗೊಳಿದೆ. ಅಲ್ಲದೇ, ರಾಜ್ಯ ಸರ್ಕಾರಕ್ಕೆ ಲಸಿಕೆ ನೀಡುವ ಜವಾಬ್ದಾರಿಯನ್ನು ನೀಡಿತ್ತು. ಇದೀಗ ಕರ್ನಾಟಕ, ದೆಹಲಿ, ಪಂಜಾಬ್, ರಾಜಸ್ಥಾನ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ಲಸಿಕೆಯ ಕೊರತೆ ಉಂಟಾಗಿ ಮೇ 1ರಂದು ಲಸಿಕೆ ನೀಡುವುದು ಅನುಮಾನ ಎಂದು ತಿಳಿಸಿವೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ಗುರುವಾರ ರಾಜ್ಯ ಸರ್ಕಾರದ ಕಾರ್ಯದರ್ಶಿ ರವಿಕುಮಾರ್ ಮಾತನಾಡಿದ್ದು, "ಸದ್ಯ ನಾವು 1 ಕೋಟಿ ಲಸಿಕೆಯನ್ನು ಆರ್ಡರ್ ಮಾಡಿದ್ದೇವೆ. ಆದರೆ, ಆರ್ಡರ್ ಮಾಡಿರುವ ಲಸಿಕೆ ಬಂದ ಬಳಿಕವೇ ನಾವು ಲಸಿಕೆ ಅಭಿಯಾನವನ್ನು ಪ್ರಾರಂಭಿಸುತ್ತೇವೆ. ಸದ್ಯದ ಪರಿಸ್ಥಿಯನ್ನು ನೋಡಿದರೆ ಮೇ. 1ರಂದು ಲಸಿಕೆ ನೀಡುವುದು ಅನುಮಾನ" ಎಂದಿದ್ದಾರೆ.
ಕರ್ನಾಟಕಕ್ಕೆ 94,47,900 ಡೋಸ್ ನೀಡಲಾಗಿದ್ದು, ಈ ಪೈಕಿ 91,01,215 ಮಂದಿಗೆ ಡೋಸ್ ನೀಡಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 3,46,685 ಡೋಸ್ ಲಭ್ಯವಿದ್ದು, ರಾಜ್ಯಕ್ಕೆ 4 ಲಕ್ಷ ಡೋಸ್ ಹೆಚ್ಚುವರಿ ಲಸಿಕೆ ನೀಡುವುದಾಗಿ ಸಚಿವಾಲಯ ತಿಳಿಸಿದೆ.
"ಪಂಜಾಬ್, ರಾಜಸ್ತಾನ, ಛತ್ತೀಸ್ಗಢ ಹಾಗೂ ಮಹಾರಾಷ್ಟ್ರ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಮೂರನೇ ಹಂತದ ಲಸಿಕಾ ಅಭಿಯಾನದಲ್ಲಿ 18ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲು ಸಾಧ್ಯವಾಗುವುದಿಲ್ಲ" ಎನ್ನುವ ಮಾಹಿತಿ ತಿಳಿದುಬಂದಿದೆ.
ಈ ಬಗ್ಗೆ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ದಾಯ್ಜಿವಲ್ಡ್ ಜೊತೆ ಮಾತನಾಡಿದ್ದು, "ನಮ್ಮಲ್ಲಿ ಲಸಿಕೆ ಸಂಗ್ರಹ ಕಡಿಮೆ ಇದೆ. ನಾವು ಸೂಕ್ತ ಯೋಜನೆಯೊಂದಿಗೆ ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದೇವೆ. ಸೀಮಿತ ಲಸಿಕೆ ಸಂಗ್ರಹವಿರುವ ಕಾರಣ ಸ್ಥಳದಲ್ಲಿ ನೋಂದಣಿ ಮಾಡುವುದನ್ನು ನಿರಾಕರಿಸಿದ್ದೇವೆ. ಹಾಗಾಗಿ ಸಾಕಷ್ಟು ಲಸಿಕೆಗಳನ್ನು ಪೂರೈಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ" ಎಂದು ತಿಳಿಸಿದ್ದಾರೆ.