ಬೆಂಗಳೂರು, ಏ.29 (DaijiworldNews/MB) : ಇತ್ತೀಚೆಗೆ 'ಸಿನಿಮಾ, ರಾಜಕೀಯ ಜರ್ನಿ ಯಾವತ್ತೋ ಮುಗಿದು ಹೋಗಿದೆ' ಎಂದು ಹೇಳಿದ್ದ ನಟಿ, ಮಾಜಿ ಸಂಸದೆ ರಮ್ಯಾ ಇದೀಗ ಕೊರೊನಾ ನಿರ್ವಹಣೆ ವಿಚಾರದಲ್ಲಿ ಕೇಂದ್ರದ ಮೋದಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಹಲವು ಸಮಯಗಳಿಂದ ಸಾಮಾಜಿಕ ಜಾಲತಾಣದಲ್ಲಿ ನಿಷ್ಕ್ರೀಯರಾಗಿದ್ದ ಸ್ಯಾಂಡಲ್ವುಡ್ ಕ್ವೀನ್ ಎಂದೇ ಜನಪ್ರಿಯರಾದ ನಟಿ ರಮ್ಯಾ ಕೆಲ ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಹಾಗೆಯೇ ಇತ್ತೀಚೆಗೆ ಇನ್ಸ್ಸ್ಟಾಗ್ರಾಮ್ನಲ್ಲಿ ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದ ರಮ್ಯಾ, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಈ ವೇಳೆ ಸಿನಿಮಾ, ರಾಜಕೀಯ ಜರ್ನಿ ಯಾವತ್ತೋ ಮುಗಿದು ಹೋಗಿದೆ ಎಂದು ಕೂಡಾ ಹೇಳಿದ್ದರು.
ಆದರೆ ಈಗ ಮೋದಿ ಸರ್ಕಾರದ ವಿರುದ್ದ ಕಿಡಿಕಾರಿರುವ ರಮ್ಯಾ, ''ಕೊರೊನಾ ಉಂಟಾಗುತ್ತಿರುವ ಸಾವುಗಳನ್ನು ತಡೆಯಬಹುದಿತ್ತು. ಆದರೆ ಮೋದಿ ಸರ್ಕಾರ ಅಜಾಗರೂಕತೆ ಹಾಗೂ ದುರಹಂಕಾರದ ವರ್ತನೆಯಿಂದಾಗಿ ನೂರಾರು ಕೊರೊನಾ ಸೋಂಕಿತರು ಸಾಯುತ್ತಿದ್ದಾರೆ. ಜನರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ'' ಎಂದು ಹೇಳಿದ್ದಾರೆ.
''ಹಾಗೆಯೇ ಸರ್ಕಾರಕ್ಕೆ ಕೇವಲ ಅಧಿಕಾರದ ದಾಹವಿದೆ. ಯಾರ ಮಾತನ್ನೂ ಕೇಳುವುದಿಲ್ಲ. ಯಾರ ಮೇಲೆಯೂ ಅನುಕಂಪವಿಲ್ಲ. ಈಗೀನ ಸ್ಥಿತಿ ನನಗೆ ನೋವುಂಟು ಮಾಡುತ್ತಿದೆ. ಪ್ರಸ್ತುತ ಸ್ಥಿತಿಗೆ ಕೊರೊನಾ ಕಾರಣವಲ್ಲ, ಸರ್ಕಾರದ ಕಾರ್ಯವೈಖರಿಯೇ ಕಾರಣ'' ಎಂದು ಆರೋಪಿಸಿದ್ದು, ''ಬಿಜೆಪಿ ಬೆಂಬಲಿಗರು ಬುದ್ದಿಹೀನರಂತೆ ಕಾನೂನು ಹಾಗೂ ಹಕ್ಕುಗಳ ಬಗ್ಗೆ ಅಜ್ಞಾನಿಗಳಾಗಿದ್ದಾರೆ'' ಎಂದು ಹೇಳಿದರು.
''ಕಳೆದ ಬಾರಿಯ ಲಾಕ್ಡೌನ್ ಹಲವಾರು ಮಂದಿಗೆ ಸಂಕಷ್ಟವನ್ನು ಉಂಟು ಮಾಡಿತ್ತು. ಹಲವಾರು ಮಂದಿಯನ್ನು ಬಡತನ ಹಾಗೂ ಹಸಿವಿನ ಕೂಪಕ್ಕೆ ದೂಡಿತ್ತು. ಆದರೆ ಕೊರೊನಾ ಮಾತ್ರ ನಿಯಂತ್ರಣವಾಗಿರಲಿಲ್ಲ. ಅತ್ತ ಸೋಂಕು ಕೂಡಾ ನಿಯಂತ್ರಣಕ್ಕೆ ಬಂದಿಲ್ಲ, ಇತ್ತ ಆರ್ಥಿಕತೆಯೂ ಪತನವಾಗಿದೆ. ನಿರುದ್ಯೋಗ ಸಮಸ್ಯೆಯಿಂದಾಗಿ ಜನಜೀವನವೇ ಸಂಕಷ್ಟದಲ್ಲಿದೆ'' ಎಂದು ಅಭಿಪ್ರಾಯಿಸಿದರು.