ಮುಂಬೈ, ಎ.29 (DaijiworldNews/PY): ಕೊರೊನಾ ನಿಯಮ ಉಲ್ಲಂಘಿಸಿ ಚಿತ್ರೀಕರಣ ಮಾಡುತ್ತಿದ್ದ ಬಾಲಿವುಡ್ ನಟ ಜಿಮ್ಮಿ ಶೇರ್ಗಿಲ್ ಹಾಗೂ ನಿರ್ದೇಶಕರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ ಘಟನೆ ಪಂಜಾಬ್ನಲ್ಲಿ ನಡೆದಿದೆ.
ದೇಶದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಸರ್ಕಾರಗಳು ಕರ್ಫ್ಯೂ ಜಾರಿ ಮಾಡಿವೆ. ಆದರೆ, ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಚಿತ್ರತಂಡ ಪಂಜಾಬ್ನ ಲೂದಿಯಾನದಲ್ಲಿ ವೆಬ್ ಸೀರಿಸ್ ಚಿತ್ರೀಕರಣ ನಡೆಸುತ್ತಿದ್ದರು. ಯುವರ್ ಹಾನರ್ ಎನ್ನುವ ವೆಬ್ ಸರಣಿ ಚಿತ್ರೀಕರಣ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ನಟ ಜಿಮ್ಮಿ ಶೇರ್ಗಿಲ್ ಸೇರಿದಂತೆ ವೆಬ್ ಸೀರಿಸ್ ನಿರ್ದೇಶಕ ಈಶ್ವರ್ ನಿವಾಸ್ ಹಾಗೂ ಚಿತ್ರತಂಡದ 34 ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ.
ರಾತ್ರಿ 8 ಗಂಟೆಯ ಸುಮಾರಿಗೆ ಅನುಮತಿ ಇಲ್ಲದ ಖಾಸಗಿ ಶಾಲೆಯಲ್ಲಿ 150 ಜನ ಸಿಬ್ಬಂದಿಗಳು ಚಿತ್ರೀಕರಣದಲ್ಲಿ ತೊಡಗಿದ್ದರು. ಈ ವೇಳೆ ಪೊಲೀಸರು ದಾಳಿ ನಡೆಸಿದ್ದು, ನಟ, ನಿರ್ದೇಶಕ ಸೇರಿದಂತೆ ಇತರೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.