ನವದೆಹಲಿ, ಏ 29(DaijiworldNews/MS): ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಡಾ. ಮನ್ ಮೋಹನ್ ಸಿಂಗ್ ಗುರುವಾರ ಏಮ್ಸ್ ನ ಟ್ರಾಮ ಸೆಂಟರ್ ನಿಂದ ಡಿಸ್ಚಾರ್ಜ್ ಆಗಿದ್ದಾರೆ.
88 ವರ್ಷದ ಹಿರಿಯ ಕಾಂಗ್ರೆಸ್ ಮುಖಂಡರಾಗಿರುವ ಡಾ.ಮನ್ ಮೋಹನ್ ಸಿಂಗ್ ಅವರಿಗೆ ಏಪ್ರಿಲ್ 19 ರಂದು ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡಿತ್ತು. ಬಳಿಕ ಅವರು ಏಮ್ಸ್ ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
ಡಾ. ಸಿಂಗ್ ಅವರು ಕೊವಾಕ್ಸಿನ್ ನ ಎರಡು ಲಸಿಕೆ ಡೋಸ್ ಗಳನ್ನು ಪಡೆದಿದ್ದಾರೆ. ಮೊದಲನೆಯದು ಮಾರ್ಚ್ 4ರಂದು ಮತ್ತು ಎರಡನೆಯದು ಏಪ್ರಿಲ್ 3 ರಂದು. ಈ ಬಳಿಕವೂ ಅವರಿಗೆ ಏಪ್ರಿಲ್ 19ರಂದು ಕೊರೋನಾ ಸೋಂಕು ತಗುಲಿತ್ತು. ಇದೀಗ ಸುಮಾರು ಹತ್ತು ದಿನಗಳ ಬಳಿಕ ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ಕೋವಿಡ್-19 ನೆಗೆಟಿವ್ ವರದಿ ಬಂದ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಡಾ. ಸಿಂಗ್ ಕೊರೊನಾದಿಂದ ಚೇತರಿಕೆಯಾಗಿರುವುದು ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂತಸವನ್ನುಂಟುಮಾಡಿದೆ.