ನವದೆಹಲಿ, ಎ.29 (DaijiworldNews/PY): "ಪ್ರತಿನಿತ್ಯ ದೇಶಕ್ಕೆ 3 ಲಕ್ಷ ರೆಮ್ಡಿಸಿವರ್ ಚುಚ್ಚುಮದ್ದಿನ ಅವಶ್ಯಕತೆ ಇದೆ. ಇದರಲ್ಲಿ ಸುಮಾರು 67 ಸಾವಿರ ಚುಚ್ಚುಮದ್ದುಗಳನ್ನು ತಯಾರಿಸಲಾಗುತ್ತಿದೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಕೇಂದ್ರ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶ್ರೀಂಗ್ಲಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, "ಔಷಧಿ ತಯಾರಿಕೆಯಲ್ಲಿ ಭಾಗಿಯಾಗಿರುವ ಎಲ್ಲಾ ಕಂಪೆನಿಗಳ ಜೊತೆ ನಮ್ಮ ಕಾರ್ಯದರ್ಶಿಗಳು ಸೇರಿದಂತೆ ಎಲ್ಲ ರಾಯಭಾರಿಗಳು ಸಂಪರ್ಕದಲ್ಲಿದ್ದಾರೆ. ನಾವು ಸರ್ಕಾರದೊಂದಿಗೆ ಮಾತ್ರವಲ್ಲ, ಖಾಸಗಿ ವಲಯಗಳು, ಸಂಘಗಳು, ವಾಣಿಜ್ಯ ಸಂಘಟನೆಗಳಿಗೆ ಲಸಿಕೆ ಸಮರ್ಪಕ ವಿತರಣೆಗಾಗಿ ಕೆಲಸ ಮಾಡುತ್ತಿದ್ದೇವೆ" ಎಂದಿದ್ದಾರೆ.
"ಗಿಲ್ಯಾಡ್ ಸೈನ್ಸಸ್ ಹಾಗೂ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಸಂಸ್ಥೆಗಳು, ಕೊರೊನಾವನ್ನು ಎದುರಿಸಲು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಅವಶ್ಯತೆಗಳನ್ನು ಪೂರೈಕೆ ಮಾಡಲು ಭರವಸೆ ನೀಡಿದೆ. ಭಾರತವು ದಿನಕ್ಕೆ 67,000 ರೆಮ್ಡೆಸಿವಿರ್ ಚುಚ್ಚುಮದ್ದನ್ನು ಉತ್ಪಾದಿಸುತ್ತಿದ್ದರೂ, ಪ್ರಸ್ತುತ ಇದರ ಅಗತ್ಯ 2-3 ಲಕ್ಷಕ್ಕೆ ತಲುಪಿದೆ. ಹಾಗಾಗಿ ಲಸಿಕೆ ತಯಾರಕರು ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
"ಭಾರತವು ರೆಮ್ಡೆಸಿವಿರ್ ಆಂಟಿ-ವೈರಲ್ ಔಷಧವನ್ನು ಆಮದು ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದು, ಜಗತ್ತಿನ ಇತರ ಭಾಗಗಳಲ್ಲಿರುವ ರೆಮ್ಡಿಸಿವರ್ನ ಇತರ ತಯಾರಕರ ಜೊತೆ ಸಂಪರ್ಕದಲ್ಲಿದೆ. ಗಿಲ್ಯಾಡ್ ಸುಮಾರು 4.5 ಲಕ್ಷ ಡೋಸ್ನಷ್ಟು ರೆಮ್ಡಿಸಿವರ್ ಔಷಧವನ್ನು ನೀಡಲು ಬದ್ದವಾಗಿದೆ. ಯುಎಇ, ಉಜ್ಜೇಕಿಸ್ತಾನ್ ಹಾಗೂ ಬಾಂಗ್ಲಾದೇಶದಲ್ಲಿ ಅವುಗಳನ್ನು ತಯಾರು ಮಾಡಲಾಗುತ್ತಿದ್ದು, ಅವರನ್ನು ಕೂಡಾ ನಾವು ಸಂಪರ್ಕಿಸಿದ್ದೇವೆ" ಎಂದು ತಿಳಿಸಿದ್ದಾರೆ.