ರಾಯ್ಪುರ, ಏ.29 (DaijiworldNews/MB) : ಸ್ಪೋಟಕಗಳನ್ನು ಇಡುತ್ತಿದ್ದ ಸಂದರ್ಭ ಅದು ಆಕಸ್ಮಿಕವಾಗಿ ಸ್ಪೋಟವಾಗಿ ಸಾವನ್ನಪ್ಪಿದ ಮಾವೋವಾದಿ ಹೋರಾಟಗಾರ ಸೋಮ್ಜಿ ಅಲಿಯಾಸ್ ಮಣಿರಾಮ್ ಪ್ರತಿಮೆಯನ್ನು ಛತ್ತೀಸ್ಗಢದ ಬಸ್ತಾರ್ ಜಿಲ್ಲೆಯ ಗ್ರಾಮವೊಂದರಲ್ಲಿ ಸ್ಥಾಪಿಸಲಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಬಸ್ತಾರ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಸುಂದರರಾಜ್ ಪಿ, ''ಮೃತ ಮಾವೋ ನಾಯಕ ಸೋಮ್ಜಿ ಅಲಿಯಾಸ್ ಮಣಿರಾಮ್ ಬುಡಕಟ್ಟು ಜನಾಂಗದವನು. ಸಾಮಾನ್ಯವಾಗಿ ಬುಡಕಟ್ಟು ಜನಾಂಗದವರು ತಮ್ಮ ಸಮುದಾಯದ ಸದಸ್ಯರನ್ನು ಪೂಜಿಸಲು ಪ್ರತಿಮೆಗಳನ್ನು ನಿರ್ಮಿಸುತ್ತಾರೆ. ಮಾವೋವಾದಿಗಳ ಪ್ರಭಾವದಿಂದಾಗಿ ಗ್ರಾಮಸ್ಥರು ಈ ಪ್ರತಿಮೆ ನಿರ್ಮಿಸಿರಬಹುದು'' ಎಂದು ಹೇಳಿದ್ದಾರೆ.
ಈ ಪ್ರದೇಶ ನಕ್ಸಲ್ ಪೀಡಿತ ಸ್ಥಳವಾಗಿದ್ದು ನಕ್ಸಲರ ಒತ್ತಡದಿಂದಾಗಿ ಮೃತ ಮಾವೋವಾದಿ ನಾಯಕನ ಪ್ರತಿಮೆಯನ್ನು ಗ್ರಾಮಸ್ಥರು ಸ್ಥಾಪಿಸಿರಬಹುದು ಎಂದು ಕೂಡಾ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಪ್ರತಿಮೆಯನ್ನೇ ಪೊಲೀಸರು ಮಾವೋ ನಿಗ್ರಹ ಕಾರ್ಯಾಚರಣೆಗೆ ಬಳಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಂದರರಾಜ್, ''ನಾವು ಈ ಪ್ರತಿಮೆಯನ್ನೇ ಬಳಸಿಕೊಂಡು ನಕ್ಸಲರ ವಿರುದ್ದ ಕಾರ್ಯಾಚರಣೆ ನಡೆಸಲು ಮುಂದಾಗಿದ್ದೇವೆ. ನಮ್ಮ ಪ್ರತಿ ಪ್ರಚಾರದಲ್ಲೂ ನಾವು ಈ ಪ್ರತಿಮೆಯನ್ನು ಬಳಸಲಾಗುತ್ತದೆ. ರಾಜ್ಯದ ಹೊರ ಭಾಗದಲ್ಲೂ ಮಾವೋವಾದಿಗಳು ಬುಡಕಟ್ಟು ನಾಯಕರನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗುತ್ತದೆ'' ಎಂದು ತಿಳಿಸಿದರು.