ಬೆಂಗಳೂರು, ಎ.29 (DaijiworldNews/PY): "ರಾಜ್ಯ ಬಿಜೆಪಿ ಸರ್ಕಾರ ಪ್ರತೀ ವ್ಯಕ್ತಿಗೆ ತಲಾ ಹತ್ತು ಕೆ.ಜಿ ಅಕ್ಕಿ ಸೇರಿದಂತೆ ಅಗತ್ಯ ದಿನಸಿ ವಸ್ತುಗಳನ್ನು ತಕ್ಷಣ ವಿತರಿಸಬೇಕು" ಎಂದು ವಿಪಕ್ಷ ನಾಯಕ ಆಗ್ರಹಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, "ರೋಗಿಗಳಿಗೆ ಆಕ್ಸಿಜನ್, ಐಸಿಯು ಹಾಸಿಗೆಗಳು, ಆಂಬುಲೆನ್ಸ್ ಗಳು ಅಗತ್ಯ ಸಮಯದಲ್ಲಿ ಸಿಗುತ್ತಿಲ್ಲ ಎಂದು ಸತ್ಯ ಹೇಳಿದರೆ ಬಿಜೆಪಿ ನಾಯಕರು ನಾನು ಟೀಕೆ ಮಾಡುತ್ತಿದ್ದೇನೆ ಅಂತಾರೆ. ಶವ ಸಂಸ್ಕಾರ ಮಾಡಲು ಕ್ಯೂನಲ್ಲಿ ನಿಲ್ಲಬೇಕಾದ, ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. ಇದು ಸುಳ್ಳಾ? ಇದನ್ನು ಹೇಳಿದ್ರೆ ಟೀಕೆಯಾಗುತ್ತಾ?" ಎಂದು ಪ್ರಶ್ನಿಸಿದ್ದಾರೆ.
"ಸರ್ಕಾರ ಕೊರೊನಾ ಇಂದ ಸಾವಿಗೀಡಾದ ಜನರ ನಿಜ ಲೆಕ್ಕವನ್ನು ಮುಚ್ಚಿಟ್ಟು, ಜನರಿಗೆ ಸುಳ್ಳು ಹೇಳುತ್ತಿದೆ. ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಬಿಡುಗಡೆ ಮಾಡುವ ಮೃತರ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಬಿಜೆಪಿ ಸರ್ಕಾರ ಅಗತ್ಯ ವೈದ್ಯಕೀಯ ಸೌಲಭ್ಯ ನೀಡಿದ್ದರೆ ಜನ ಹೀಗೆ ಸಾಯುವ ಸನ್ನಿವೇಶ ಬರುತ್ತಿತ್ತಾ?" ಎಂದು ಕೇಳಿದ್ದಾರೆ.
ಬಡ ರೈತನೊಬ್ಬನಿಗೆ "ಹೊಟ್ಟೆಗಿಲ್ಲದಿದ್ದರೆ ಸಾಯೋದೆ ಒಳ್ಳೆಯದು" ಎಂಬ ಉಡಾಫೆ ಉತ್ತರ ನೀಡಿರುವ ಉಮೇಶ್ ಕತ್ತಿ ಸಚಿವನಾಗಿ ಮುಂದುವರೆಯಲು ನಾಲಾಯಕ್. ಕತ್ತಿ ಪರವಾಗಿ ಸಿಎಂ ಯಡಿಯೂರಪ್ಪ ವಿಷಾದ ವ್ಯಕ್ತಪಡಿಸುವ ಬದಲು ಮಂತ್ರಿಮಂಡಲದಿಂದ ಕೈಬಿಡಬೇಕಿತ್ತು. ಇಂತಹ ಅಯೋಗ್ಯರನ್ನು ಇಟ್ಟುಕೊಂಡು ಸರ್ಕಾರ ಬಡವರ ಪರವಾಗಿ ಕೆಲಸ ಮಾಡಲು ಆಗುತ್ತಾ? ಎಂದಿದ್ದಾರೆ.
"ಲಾಕ್ಡೌನ್ ನಿಂದಾಗಿ ಜನ ಕೆಲಸ ಇಲ್ಲದೆ ಮನೆಯಲ್ಲಿ ಕೂತಿದ್ದಾರೆ, ಅಗತ್ಯ ವಸ್ತುಗಳನ್ನು ಕೊಳ್ಳಲು ಅವರ ಬಳಿ ಹಣವಿಲ್ಲ. ಹಾಗಾಗಿ ರಾಜ್ಯ ಬಿಜೆಪಿ ಸರ್ಕಾರ ಪ್ರತೀ ವ್ಯಕ್ತಿಗೆ ತಲಾ ಹತ್ತು ಕೆ.ಜಿ ಅಕ್ಕಿ ಸೇರಿದಂತೆ ಅಗತ್ಯ ದಿನಸಿ ವಸ್ತುಗಳನ್ನು ತಕ್ಷಣ ವಿತರಿಸಬೇಕು ಎಂದು ಸಿಎಂ ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ" ಎಂದು ಆಗ್ರಹಿಸಿದ್ದಾರೆ.